|
`ರಸೋ ವೈ ಸಃ' (ತೈ. ಉ) ಬ್ರಹ್ಮವು ಸರ್ವಪ್ರಾಣಿಗಳ ಆತ್ಮನಾಗಿ ರಸರೂಪವಾಗಿರುತ್ತದೆ. ಆ
ರಸರೂಪವಾದ ಬ್ರಹ್ಮದ ಬಲದಿಂದಲೇ ನಾವು ಆನಂದವನ್ನು ಹೊಂದಿದ್ದೇವೆ. ಒಂದು ವೇಳೆ ನಮ್ಮ
ನಿಜಸ್ವರೂಪವು ಆನಂದವಲ್ಲದೇ ಹೋಗಿದ್ದರೆ ಜೀವಿಸಬೇಕೆಂದು ಯಾರೂ ಬಯಸುತ್ತಿರ ಲಿಲ್ಲ. ಈ ಆನಂದ
ತತ್ತ್ವವನ್ನು ನಾವು ಅನುಭವಿಸುತ್ತಿರುವೆವಾದರೂ ಅದರ ಅರಿವು ನಮಗಿಲ್ಲ. ಈ ಆನಂದವನ್ನು
ಅನುಭವಿಸುವುದನ್ನೇ ಮೋಕ್ಷವೆಂದು ಕರೆದಿದ್ದಾರೆ. ಇದನ್ನು ವೇದಾಂತಜ್ಞಾನ ದಿಂದ
ಮಾತ್ರವಲ್ಲದೇ ಸಂಗೀತದ ಮೂಲಕವೂ ಸಾದಿsಸಬಹುದೆಂದು ತೋರಿಸಿಕೊಟ್ಟ ಮಹಾನು ಭಾವರು ಶ್ರೀ
ತ್ಯಾಗರಾಜರು. ಸಂಗೀತವೂ ರಸಸ್ಯಂದಿಯಾಗಿ ಬ್ರಹ್ಮಾನಂದವನ್ನುಂಟುಮಾಡುವುದ ರಿಂದ ಮೋಕ್ಷಕ್ಕೆ
ಸಾಧನೆಯಾಗಿದೆ.
ಧ್ಯಾಯನ್ ಕೃತೇ ಯಜನ್ ಯಜ್ಞೈಸ್ತ್ರೇತಾಯಾಂ ದ್ವಾಪರೇಽರ್ಚಯನ್ |
ಯದಾಪ್ನೋತಿ ತದಾಪ್ನೋತಿ ಕಲೌ ಸಂಕೀರ್ತ್ಯ ಕೇಶವಮ್ ||
ಕೃತದಲ್ಲಿ ಧ್ಯಾನವೂ ತ್ರೇತಾಯುಗದಲ್ಲಿ ಯಜ್ಞಯಾಗಾದಿಗಳು ದ್ವಾಪರಯುಗದಲ್ಲಿ ಪೂಜೆ
ಅರ್ಚನಾದಿಗಳು ಇವುಗಳನ್ನು ಮಾಡುವುದರಿಂದ ಯಾವ ಫಲ ಬರುತ್ತದೆಯೋ ಅದೇ ಫಲವು ಕಲಿಯುಗದಲ್ಲಿ
ಕೇಶವನ ಸಂಕೀರ್ತನದಿಂದ ಬರುತ್ತದೆ ಎಂದು ವಿಷ್ಣುಪುರಾಣದಲ್ಲಿ ಸಾರಿದೆ. ತೊಂಬತ್ತಾರು ಕೋಟಿ
ರಾಮನಾಮ ತಾರಕ ಮಂತ್ರವನ್ನು ಇಪ್ಪತ್ತೊಂದು ವರ್ಷಗಳ ಕಾಲ ಜಪಿಸಿ ಶ್ರೀರಾಮಚಂದ್ರನನ್ನೇ
ಸಾಕ್ಷಾತ್ಕಾರಮಾಡಿಕೊಂಡ ಶ್ರೀ ತ್ಯಾಗರಾಜರು ಭಗವಂತನ ದಿವ್ಯನಾಮ ಗಳ ಕೃತಿಗಳನ್ನು ರಚಿಸಿ
ಸ್ವರ-ರಾಗ-ರಸ-ಭಾವಗಳನ್ನು ಹೊಮ್ಮಿಸುವ ಸಂಗೀತವು ಕಿವಿಯನ್ನು ತೂರಿ ಹೃದಯವನ್ನು
ಪ್ರವೇಶಿಸಿದಾಗ ಮನಸ್ಸಿನಲ್ಲಿರುವ ರಾಗದ್ವೇಷಾದಿಗಳನ್ನು ತೊಡೆದು ಹಾಕಿ, ಮನುಷ್ಯನನ್ನು
ಸನ್ಮಾರ್ಗಪ್ರವರ್ತಕನನ್ನಾಗಿ ಮಾಡಿ ದೈವೀಭಾವವನ್ನುಂಟುಮಾಡುತ್ತದೆ ಎಂಬುದನ್ನು
``ಸ್ವರ-ರಾಗ-ರಸಯುತ ಭಕ್ತಿ ಸ್ವರ್ಗಾಪವರ್ಗಮು ರಾ ಮನಸಾ'' ಎಂಬ ಕೀರ್ತನೆ ಯಲ್ಲಿ
ಹಾಡಿದ್ದಾರೆ. ಇಂಥ ದೈವೀಭಾವವುಂಟಾಗಬೇಕಾದರೆ ಸಂಗೀತವಿದ್ವಾಂಸನು ಕಲಾತಪಸ್ವಿ ಯಾಗಿರಬೇಕು.
ಸರಸ್ವತಿಯ ಆರಾಧಕನಾಗಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಭಗವಂತನ ಪರಮ ಭಕ್ತನಾಗಿರಬೇಕು.
ಭಕ್ತಿರಹಿತವಾದ ಸಂಗೀತವು ಸನ್ಮಾರ್ಗದಿಂದ ದೂರವಾಗುವುದಕ್ಕೆ ಕಾರಣ ವಾಗಿರುತ್ತದೆ
ಎಂಬುದನ್ನು ಶ್ರೀತ್ಯಾಗರಾಜರು ``ಸಂಗೀತಜ್ಞಾನಮು ಭಕ್ತಿವಿನಾ, ಸನ್ಮಾರ್ಗಮು ಗಲದೇ''
ಎಂದಿದ್ದಾರೆ.
ವೇದಾಂತಜ್ಞಾನವೂ ಹಾಗೂ ಮೋಕ್ಷವೂ ಗೀತೆ ಹೇಳಿರುವಂತೆ ``ಬಹೂನಾಂ ಜನ್ಮನಾಂ ಅಂತೇ
ಜ್ಞಾನವಾನ್ ಮಾಂ ಪ್ರಪದ್ಯಂತೇ (ಬಹು ಜನ್ಮಗಳ ನಂತರ ಜ್ಞಾನಿಯು ನನ್ನನ್ನೇ ಪಡೆಯುತ್ತಾನೆ),
ರಾಗದ ಜ್ಞಾನವೂ ಸ್ವಾಭಾವಿಕ ಜನ್ಯವಾದ ಭಕ್ತಿಯೂ ಇರುವವನೂ ಮುಕ್ತಿ ಯನ್ನು ಪಡೆಯುತ್ತಾನೆ
ಎಂದಿದ್ದಾರೆ ಶ್ರೀ ತ್ಯಾಗರಾಜರು. ``ಬಹು ಜನ್ಮ ಮುಲಕು ಪೈನಿ ಜ್ಞಾನಿಯೈ ಬರಗುಟ
ಮೋಕ್ಷಮುರಾ, ಸಹಜ ಭಕ್ತಿತೋ ರಾಗಜ್ಞಾನ ಸಹಿತುಡು ಮುಕ್ತಿದುರಾ ಮನಸಾ'' ಶಾಸ್ತ್ರದಲ್ಲಿ
ಹೇಳಿರುವಂತೆ ಸಂಗೀತ ಸಪ್ತಸ್ವರಗಳು `ಓಂಕಾರ' ನಾದದಿಂದ ಸ್ಫುರಿಸುತ್ತದೆ ಎಂಬುದನ್ನು
ತ್ಯಾಗರಾಜರು (`ನ' ಕಾರಂ ಪ್ರಾಣನಾಮಾನಂ `ದ' ಕಾರಮನಲಂ ವಿದುಃ | ಜಾತಃ ಪ್ರಾಣಾಗ್ನಿ
ಸಂಯೋಗಾತ್ ತೇನ ನಾದೋಽಬಿsದಿsಯತೇ ||) ``ನೀ ಸದ್‌ಭಕ್ತಿ-ಸಂಗೀತಜ್ಞಾನ ವಿಹೀನುಲುಕು
ಮೋಕ್ಷಮು ಗಲದು ಪ್ರಾಣಾನಲ ಸಂಯೋಗಮು ವಲ್ಲಾ ಪ್ರಣವನಾದಮು ಸಪ್ತಸ್ವರಮುಲೈ ಬರಗಾ'' ಆ
ಓಂಕಾರನಾದವೇ ಪ್ರಣವ, ಆ ಪ್ರಣವವೇ ಬ್ರಹ್ಮ (`ಓಂ' ಇತ್ಯೇಕಾಕ್ಷರಂ ಬ್ರಹ್ಮ). ಇಂಥ
ಬ್ರಹ್ಮಜ್ಞಾನವನ್ನು ಪಡೆಯ ಬೇಕಾದರೆ ಸಾಧನೆ ಬೇಕು. ಜೊತೆಗೆ ಭಕ್ತಿಯೂ ಬೇಕು. ಆದ್ದರಿಂದ
ಭಗವದ್ಭಕ್ತನಿಗೆ `ಅಥಾತೋ ಬ್ರಹ್ಮಜಿಜ್ಞಾಸಾ' - ಬ್ರಹ್ಮ ಎಂದರೆ ಏನು ಎಂದು ಜಿಜ್ಞಾಸೆ
ಮಾಡಲು ಅವಶ್ಯ ವಾಗಿರಲೇಬೇಕಾದ ಅದಿsಕಾರ ಕಾರಣಗಳಿವೆ. ಅವುಗಳೆಂದರೆ
``ನಿತ್ಯಾನಿತ್ಯವಸ್ತುವಿವೇಕಃ, ಇಹಾಮುತ್ರಫಲಭೋಗವಿರಾಗಃ, ಶಮದಮಾದಿ ಸಾಧನಸಂಪತ್,
ಮುಮುಕ್ಷುತ್ವಂ ಚೇತಿ'' (ವಿವೇಕಚೂಡಾಮಣಿ). ಅಂದರೆ ಈ ಲೋಕ, ಸತ್ತಮೇಲೆ ಅನುಭವಕ್ಕೆ ಬರುವ
ಪಿತೃಲೋಕ, ಸ್ವರ್ಗಲೋಕ ಮುಂತಾದವುಗಳ ಸುಖಭೋಗಗಳಲ್ಲಿ ಇರುವ ದೋಷವನ್ನೂ ದುಃಖವನ್ನೂ ಕಂಡು
ಅದರಲ್ಲಿ ವೈರಾಗ್ಯವನ್ನು ಹೊಂದುವುದು, ಅಂತರಿಂದ್ರಿಯ, ಬಹಿರಿಂದ್ರಿಯ ನಿಗ್ರಹ, ಉಪರತಿ,
ತಿತಿಕ್ಷಾ, ಶ್ರದ್ಧೆ, ಸಮಾಧಾನ, ಮುಮುಕ್ಷುತ್ವ ಇವುಗಳು ಅದಿsಕಾರ ಕಾರಣಗಳು. ಇದನ್ನೇ
ಶ್ರೀತ್ಯಾಗರಾಜರು ತಮ್ಮ ಸಹಾನ ರಾಗದ ಕೀರ್ತನೆಯಲ್ಲಿ ``ಊರಕೆ ಗಲ್ಗುನಾ ರಾಮುನಿ ಭಕ್ತಿ ?
ಸಾರೆಕುನು ಸಂಸಾರಮುನ ಜೋಚ್ಚಿ ಸಾರಮನಿ ಯಂಚುವಾರಿ ಮನಮುನ'' ಎಂದು ಹೇಳಿದ್ದಾರೆ. ಶ್ರೀ
ತ್ಯಾಗರಾಜರು ಇಂದ್ರಿಯಗಳಿಂದ ಅನುಭವಿಸುವ ಸುಖಭೋಗಗಳನ್ನು, ಸಂಪತ್ತನ್ನು ತಿರಸ್ಕರಿಸಿ
ಬ್ರಹ್ಮಾನಂದವೇ ಪರಮಸುಖ ಎಂದು ``ನಿದಿs ಚಾಲಸುಖಮಾ, ರಾಮುನಿ ಸನ್ನಿದಿs ಸೇವಾ ಸುಖಮಾ ?
ನಿಜಮುಗ ಬಲ್ಕು ಮನಸಾ'' ಎಂಬ ಕೀರ್ತನೆಯಲ್ಲಿ ಹಾಡಿದ್ದಾರೆ.
ಸಾಧನೆಯ ಜೊತೆಗೆ ಸತ್ಸಂಗದ ಅವಶ್ಯಕತೆಯನ್ನು ಅದರಿಂದ ದೊರೆಯುವ ಪುಣ್ಯವನ್ನು ಶ್ರೀ
ತ್ಯಾಗರಾಜರು ``ಇಂತಾ ಭಾಗ್ಯಮುನಿ ನಿರ್‍ಣಯಿಂಪ ಬ್ರಹ್ಮೇಂದ್ರಾದುಲ ತರಮಾ ?'' ಎಂಬ
ಕೀರ್ತನೆಯಲ್ಲಿ ಎತ್ತಿ ಹಿಡಿದಿದ್ದಾರೆ. ಸತ್ಸಂಗದ ಜೊತೆಗೆ ಸದ್ಗುರುವಿನ ಅವಶ್ಯಕತೆಯೇ
(ಆಚಾರ್ಯವಾನ್ ವೇದ) ಗೌರೀ ಮನೋಹರಿ ರಾಗದ ``ಗುರುಲೇಕ ಯಟುವಂಟಿ ಗುಣಿಕಿ ದೆಲಿಯಗಬೊಡು
ಕರುಕೈನ ಹೃದ್ರೋಗ ಗಹನಮುನ ಗೊಟ್ಟನು ಸದ್ಗುರು ಲೇಕ ಯಟುವಂಟಿ'' ಎಂಬ ಕೀರ್ತನೆಯ
ವಸ್ತುವಾಗಿದೆ.
ಸಾಧನೆಯಲ್ಲಿ ಮನಸ್ಸು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. (ಮನ ಏವ ಮನುಷ್ಯಾಣಾಂ
ಕಾರಣಂ ಬಂಧಮೋಕ್ಷಯೋಃ) ಮನಸ್ಸನ್ನು ನಿಗ್ರಹಿಸದೇ ಮಂತ್ರವಾಗಲಿ, ತಂತ್ರವಾಗಲಿ, ತಪಸ್ಸಾಗಲಿ
ಪ್ರಯೋಜನವಾಗುವುದಿಲ್ಲ. ಅದು ಕೇವಲ ಮಿಥ್ಯಾಚಾರವೆನ್ನಿಸಿಕೊಳ್ಳುತ್ತದೆ. (ಕರ್ಮೇಂದ್ರಿಯಾಣಿ
ಸಂಯಮ್ಯ ಯ ಆಸ್ತೇ ಮನಸಾ ಸ್ಮರನ್ | ಇಂದ್ರಿಯಾರ್ಥಾನ್ ವಿಮೂಢಾತ್ಮಾ ಮಿಥ್ಯಾಚಾರಃ ಸ ಉಚ್ಯತೇ
||) ಎಂದಿದ್ದಾರೆ. ಶ್ರೀ ತ್ಯಾಗರಾಜರು ಶಂಕರಾಭರಣದ ಕೀರ್ತನೆಯಲ್ಲಿ ``ಮನಸು ಸ್ವಾದಿsನಮೈನ
ಯಾಘಾನುಮಿಕಿ ಮರಿ ಮಂತ್ರ ತಂತ್ರನು ಲೇಲಾ ?'' ಈ ಸಾಧನೆಗೆ ಸಂನ್ಯಾಸವನ್ನೇ
ಸ್ವೀಕರಿಸಬೇಕಾಗಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
``ಅನ್ನಿ ನೀವನುಚು ಯೆಂಚಿನ ವಾಣಿಕಿ ಆಶ್ರಮ ಭೇದಮುಲೇಲ'' ಮನಸ್ಸಿನ ಪರಿಶುದ್ಧತೆಯೇ
ಬಹುಮುಖ್ಯವಾದುದು. ಆದರೆ ಮನಸ್ಸಿನ ಏಕಾಗ್ರತೆಯನ್ನು ಸಂಪಾದಿಸಿಕೊಂಡು ಭಗವಂತನಲ್ಲಿ
ತೊಡಗಿಸಿಕೊಳ್ಳದೇ ಹೋದರೆ ಜಪ, ಯಜ್ಞ, ತಪಸ್ಸು, ಪುರಾಣಶ್ರವಣ ಇವುಗಳಿಂದ ಬರುವ ಫಲವು
ತಾತ್ಕಾಲಿಕ ಸುಖವಾಗಿದ್ದು ಆ ಸುಖವು ``ಕ್ಷೀಣೇ ಪುಣ್ಯೇ ಮರ್ತ್ಯಲೋಕೇ ವಿಶಂತಿ'' ಎಂದು
ಮತ್ತೆ ಮತ್ತೆ ಜನ್ಮವೆತ್ತಬೇಕಾಗುವುದೆಂಬುದನ್ನು ``ಗೀರ್ವಾಣ ನಾಟಕ ಅಲಂಕಾರ ವೇದಪುರಾಣ
ಯಜ್ಞ ಜಪ ತಪದುಲು ಫಲಮು ಕ್ಷೀಣಮೈ ತಿರುಗ ಜನ್ಮಿಂಚು ಸಿದ್ಧಿ ಮನುನ್ ಓ ! ಮನಸಾ !'' ಎಂಬ
ಕೀರ್ತನೆಯಲ್ಲಿ ತೋರಿಸಿದ್ದಾರೆ. ಉಪನಿಷತ್ತಿನಲ್ಲೂ ``ಅಯಮಾತ್ಮಾ ಪ್ರವಚನೇನ ನ ಲಭ್ಯಃ, ನ
ಮೇಧಯಾ, ನ ಬಹುದಾ ಶೃತೇನ'' ಎಂದಿದೆ. ಸಾಧನೆಗೆ ಭಕ್ತಿಯು ಮುಖ್ಯವಾದುದೆಂದು ಒತ್ತಿ
ಹೇಳಿದ್ದಾರೆ. ಭಕ್ತಿಯೊಂದೇ ಮುಕ್ತಿಗೆ ಸಾಧನ. ಸಂಸಾರಿಯಾದವನು ನಿಜವಾದ ಭಕ್ತಿಯನ್ನು
ಹೊಂದಿ, ಸರ್ವ ಕರ್ಮ ಫಲತ್ಯಾಗಿಯಾಗಿ, ಮನಸ್ಸಿನಲ್ಲಿ ಯಾವ ಉದ್ವೇಗಕ್ಕೂ ಒಳಗಾಗದೇ, ಯಾವ
ಹಿಂಸೆ, ಕ್ರೌರ್ಯ, ಕೆಟ್ಟಗುಣಗಳಿಗಾಗಲಿ ಅವಕಾಶಕೊಡಬಾರದೆಂಬುದನ್ನು ಸಾವೇರಿ ರಾಗದ ಈ
ಕೀರ್ತನೆಯಲ್ಲಿ ಹಾಡಿದ್ದಾರೆ.
``ಸಂಸಾರಲೈತೇ ನೇಮಯ್ಯ ಸಿಖಿ ಪಿಂಚವ ತಂಸು ದೇದುತ ನುಂದಗೋ''.
ಮನಸ್ಸಿನ ಏಕಾಗ್ರತೆಯನ್ನೂ, ಭಕ್ತಿಯನ್ನೂ ಭಗವಂತನ ಅನಂತ ನಾಮ, ಗುಣ, ಕರ್ಮ, ವೈಭವಗಳ
(ನಾಮಾನ್ಯನಂತಸ್ಯ ಯಶೀಙತಾನಿ) ಜಪದಿಂದ ಸಾದಿsಸಬಹುದೆಂಬುದನ್ನು ಜನರಂಜನಿರಾಗದ ``ಸ್ಮರಣೆ
ಸುಖಮು ರಾಮನಾಮ ನರುಡೈ ಬುಟ್ಟಿನಂದುಕು ನಾಮ'' ಕೀರ್ತನೆಯಲ್ಲಿ ತೋರಿಸಿದ್ದಾರೆ. ಅದರಲ್ಲೂ
ತ್ಯಾಗರಾಜರು ರಾಮನಾಮವನ್ನು ನಿರಂತರವಾಗಿ ಭಜಿಸಲು ಹೇಳಿದ್ದಾರೆ. ಏಕೆಂದರೆ
ರಾಮನಾಮ-ತಾರಕಮಂತ್ರ, ತಾನು ಮರೆತರೂ ತನ್ನ ನಾಲಿಗೆ ರಾಮನಾಮವನ್ನು ಮರೆಯುವುದಿಲ್ಲ
ಎಂದಿದ್ದಾರೆ. ``ನರವ್ವಾ ಉನ್ನೈ ನಾನ್ ಮರಕ್ಕಿಮಮ್ ಸೊಲ್ಲು ನಾ ನಮಃ ಶಿವಾಯವೇ'' ಭಗವಂತನ
ನಾಮಸ್ಮರಣೆಗೆ ಮತಭೇದವಿಲ್ಲ. ಎಲ್ಲರೂ ಅದಿsಕಾರಿ ಗಳು ಎಂಬುದನ್ನು ``ಮತಭೇದ
ಪತಿತ-ಮಾನವ-ಮದ-ಸಂತತ ಭಂಗ'' ಎಂಬ ಕೀರ್ತನೆ ಯಲ್ಲಿ ಹೇಳಿದ್ದಾರೆ.
ಪದ್ಮಪುರಾಣದಲ್ಲಿ ನಾಮ ಜಪಿಸುವವರಿಗೆ ಇರಬಹುದಾದ ಹತ್ತು ದೋಷಗಳನ್ನು ಹೇಳಿದೆ.
ಶಿವವಿಷ್ಣುಭೇದ, ಗುರುನಿಂದನೆ, ವೇದಶಾಸ್ತ್ರಗಳು ಬೇಕಿಲ್ಲ ಎನ್ನುವುದು, ನಾಮ
ಜಪಿಸುವೆನೆಂದು ಧರ್ಮಾಧರ್ಮಗಳನ್ನು ಬಿಡುವುದು, ಮನಸ್ಸಿನಲ್ಲಿ ಪರಿಶುದ್ಧತೆಯಿಲ್ಲದಿರು
ವುದು, ಹಿಂಸೆ, ಕಳ್ಳತನ, ಬ್ರಹ್ಮಚರ್ಯವಿಲ್ಲದಿರುವುದು ಇತ್ಯಾದಿ. ಶ್ರೀತ್ಯಾಗರಾಜರು
ಜಪಿಸುವವರ ಅರ್ಹತೆಯನ್ನು ``ತೆಲಿಸಿ ರಾಮ ಚಿಂತನತೋ ನಾಮಮು ಓ ಮನಸಾ !'' ಎಂಬ
ಕೀರ್ತನೆಯಲ್ಲಿ ಹೇಳಿದ್ದಾರೆ. ಮನಸ್ಸಿನ ಪರಿಶುದ್ಧತೆ, ನಿಯಂತ್ರಣ, ಭಕ್ತಿ, ಏಕಾಗ್ರತೆ,
ತಾರಕರೂಪವನ್ನು ಮನಸ್ಸಿಗೆ ತಂದುಕೊಳ್ಳಬೇಕೆಂಬುದು ಅಬಿsಪ್ರಾಯ. ಭಾಗವತದಲ್ಲಿ ಒಂಭತ್ತು
ವಿಧವಾದ ಭಕ್ತಿಯನ್ನು ಹೇಳಿದೆ.
ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ | ಅರ್ಚನಂ ವಂದನಂ
ದಾಸ್ಯಂ ಸಖ್ಯಂ ಆತ್ಮನಿವೇದನಮ್ ||
ಸಾಧಕನಾದವನು ಇದರಲ್ಲಿ ಯಾವುದಾದರೂ ಒಂದು ವಿಧ ಭಕ್ತಿಯನ್ನು ಅಭ್ಯಾಸಮಾಡ ಬಹುದು ಅಥವಾ
ಸಾಧ್ಯವಾಗುವುದಾದರೆ ಎಲ್ಲಾ ವಿಧದ ಭಕ್ತಿಯನ್ನೂ ಅನುಸರಿಸಬಹುದು. ಆದರೆ ಶ್ರೀ ತ್ಯಾಗರಾಜರು
ತಮ್ಮ ರಾಮನಾಮಜಪದಲ್ಲಿ ಒಂಬತ್ತು ವಿಧದ ಭಕ್ತಿಯನ್ನು ಮಾಡಿ ತಾವೇ ಅದಕ್ಕೆ
ಉದಾಹರಣೆಯಾಗಿದ್ದರು. ``ಜಂತೂನಾಂ ನರಜನ್ಮ ದುರ್ಲಭಂ'' ಎಂದು ಭಗವಂತನು ಈ ದೇಹವನ್ನೂ
ಕೊಟ್ಟಿರುವುದರಿಂದ ನನ್ನ ದೇಹದ ಎಲ್ಲಾ ಭಾಗಗಳಿಂದಲೂ ಅವನ ಸೇವೆ ಮಾಡಲು
ತೊಡಗಿಸಿಕೊಳ್ಳುತ್ತೇನೆ'' ಎಂದು ಅಬಿsಪ್ರಾಯವನ್ನು ಮುಖಾರಿರಾಗದ ಕೀರ್ತನೆಯಲ್ಲಿ
ಹಾಡಿದ್ದಾರೆ. ``ಇಂದುಕಾ ಈ ತನ್ಪುನು ಬೆಂಚಿನ ನೀ ಸೇವಕುಲೇಕ ನೀಡು ಈ ಚೆಂತಕುರಾಕ''.
ಶ್ರೀ ತ್ಯಾಗರಾಜರು ಹೀಗೆ ಭಗವಂತನ ಸಾಕ್ಷಾತ್ಕಾರಕ್ಕೆ ಸಾಧನಗಳನ್ನು ಕೃತಿಗಳ ಮೂಲಕವೇ
ತೋರಿಸಿಕೊಟ್ಟಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಸಾಮಾನ್ಯವಾಗಿ ಸಂಗೀತಗಾರರು
ಸಾಹಿತ್ಯವನ್ನು ಉಪೇಕ್ಷೆ ಮಾಡುತ್ತಾರೆ ಎಂಬ ಮಾತಿದೆ. ಸಾಹಿತ್ಯರಾಗಗಳೆರಡೂ ದೇಹ ಮನಸ್ಸು
ಗಳೆರಡಕ್ಕೂ ಚೈತನ್ಯವನ್ನು ಕೊಡುತ್ತದೆ. ಭಾವೋನ್ನತಿಯನ್ನೂ ಸತ್ವದ ಉದ್ರೇಕವನ್ನೂ ತಂದು
ಕೊಡುವುದು. ಸಾಹಿತ್ಯ ಉತ್ತಮ ಜೀವನಕ್ಕೆ ಸಾಧನ. ಬಾಳಿಗೆ ಬೆಳಕು. ಆತ್ಮಶಕ್ತಿಯನ್ನು
ಪೋಷಿಸುವ ಸಾರವಸ್ತು. ಸಾಹಿತ್ಯದ ಕೆಲಸ ಪರಮಾತ್ಮನ ಮಹಿಮೆಯನ್ನೂ, ಆತನನ್ನು ಬಿಟ್ಟು ಯಾವುದೂ
ಚಲಿಸುವುದಿಲ್ಲ ಎಂಬ ವೇದಾಂತವನ್ನೂ ಪ್ರತಿಪಾದಿಸುವುದು. ಹಾಗಾದಾಗ ಜನರನ್ನು ಮೇಲ್ಮಟ್ಟ
ಕ್ಕೊಯ್ಯುವ ಕಾರ್ಯವು ಸಾದಿsತವಾಗುತ್ತದೆ. ಪರಮಾತ್ಮನನ್ನು ಕಾಣುವುದೇ ಸಾಕ್ಷಾತ್ಕಾರ. ಅದೇ
ಜೀವನದ ಪರಮ ಗುರಿ.
|