|
ಕರ್ಣಾಟಕ ಸಂಗೀತ ಕ್ಷೇತ್ರದಲ್ಲಿ ತ್ಯಾಗರಾಜರ ಹೆಸರು ಅಜರಾಮರವಾದದ್ದು-ವಿಶ್ವವಿಖ್ಯಾತ
ವಾದದ್ದು. ಕರ್ಣಾಟಕ ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರಾಗಿ ನಾದೋಪಾಸಕರಾಗಿ ವಾಗ್ಗೇಯ
ಕಾರರಾಗಿ ಭಕ್ತಶಿರೋಮಣಿಗಳಾಗಿ ರಾಮಭಕ್ತಿ ಸಾಮ್ರಾಜ್ಯವನ್ನೇ ನಿರ್ಮಿಸಿ ನಲಿದ ಮಹಾನು ಭಾವರು
ಶ್ರೀ ತ್ಯಾಗರಾಜರು. ಅವರ ಅಮೋಘವಾದ ಕಾರ್ಯಸಾಧನೆ ಆಚಂದ್ರಾರ್ಕವಾಗಿ ಉಳಿಯುವಂಥಹುದು.
ರಾಮಾಯಣವನ್ನು ಕುರಿತ
``ಯಾವತ್ತಿಷ್ಠಂತಿ ಗಿರಯಃ ಸರಿತಶ್ಚ ಮಹೀತಲೇ | ತಾವದ್ರಾಮಾಯಣ ಕಥಾ
ಲೋಕೇಷು ಪ್ರಚಲಿಷ್ಯತಿ ||''
ಎಂಬ ವಾಲ್ಮೀಕಿ ವಾಣಿ ತ್ಯಾಗರಾಜರಿಗೂ ಅನ್ವಯಿಸುತ್ತದೆ. ಭೂಮಂಡಲದಲ್ಲಿ ಎದುವರೆಗೂ
ನದೀನದಗಳೂ ಪರ್ವತಶ್ರೇಣಿಗಳೂ ವಿರಾಜಿಸುತ್ತಿರುವುವೋ ಅದುವರೆವಿಗೂ ಶ್ರೀತ್ಯಾಗರಾಜರೂ ಅವರ
ಕೃತಿಗಳೂ ಜೀವಂತವಾಗಿ ಕಾಂತಿಯುಕ್ತವಾಗಿ ಬೆಳಗುವ ದೀಪಗಳು. ತ್ಯಾಗರಾಜರಿಗೆ ಹಿಂದೆಯೇ
ಕರ್ಣಾಟಕ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ನಡೆದಿತ್ತು. ಜಯದೇವ ಕವಿಯ ಗೀತಗೋವಿಂದ,
ನಾರಾಯಣತೀರ್ಥರ ಕೃಷ್ಣಲೀಲಾ ತರಂಗಿಣಿ, ಅನ್ನಮಾಚಾರ್ಯರ ಮತ್ತು ಭದ್ರಾಚಲರಾಮ ದಾಸರ
ರಚನೆಗಳಲ್ಲದೆ ವಿಪುಲವಾದ ದಾಸಸಾಹಿತ್ಯವೂ ಸಿದ್ಧವಾಗಿದ್ದವು. ಈ ಮಹನೀಯರೆಲ್ಲರೂ ಕರ್ಣಾಟಕ
ಸಂಗೀತ ಕ್ಷೇತ್ರವನ್ನು ಉಜ್ವಲಗೊಳಿಸಿದ ಭಕ್ತಾಗ್ರಗಣ್ಯರು. ಸಂಗೀತ ರಚನೆಗಳಿಗೆ
ಕೃತಿರೂಪವನ್ನು ಕೊಟ್ಟು ವ್ಯವಸ್ಥೆಗೊಳಿಸಿ ಬೆಳೆಸಿದ ಕೀರ್ತಿ ತ್ಯಾಗರಾಜರಿಗೆ ಸಲ್ಲಬೇಕು.
ಈ ಸಂದರ್ಭದಲ್ಲಿ ಕರ್ಣಾಟಕ ಸಂಗೀತ ತ್ರಿಮೂರ್ತಿಗಳಲ್ಲಿ ಮತ್ತಿಬ್ಬರಾದ
ಶ್ಯಾಮಶಾಸ್ತ್ರಿಗಳನ್ನೂ ಮುತ್ತುಸ್ವಾಮಿ ದೀಕ್ಷಿತರನ್ನೂ ಸ್ಮರಿಸಬೇಕು.
ತಂಜಾವೂರು ಜಿಲ್ಲೆಯಲ್ಲಿ ತಿರುವಾರೂರು ಎಂಬುದೊಂದು ಗ್ರಾಮ. ಇಲ್ಲಿಯ ಅದಿsಷ್ಠಾನ ದೇವತೆ
ಶ್ರೀತ್ಯಾಗರಾಜೇಶ್ವರಸ್ವಾಮಿ. ಈ ತ್ಯಾಗರಾಜದೇವಾಲಯ ಭಕ್ತಕೋಟಿಯನ್ನು ಆಕರ್ಷಿಸುತ್ತಿ ರುವ
ಪುಣ್ಯಧಾಮ. ಅದೇ ಕಾರಣದಿಂದಲೇ ತಿರುವಾರೂರು ಒಂದು ಪವಿತ್ರ ಯಾತ್ರಾಸ್ಥಳ. ಇದೇ ತ್ಯಾಗರಾಜರ
ಜನ್ಮಭೂಮಿ. ಬಹುಕಾಲದಿಂದ ಸಂತಾನವಿಲ್ಲದೆ ಕೊರಗುತ್ತಿದ್ದ ಶಾಂತಮ್ಮ-ರಾಮಬ್ರಹ್ಮ
ದಂಪತಿಗಳಿಗೆ ತ್ಯಾಗರಾಜೇಶ್ವರಸ್ವಾಮಿಯ ಅನುಗ್ರಹದಿಂದ ಜನಿಸಿದ ಪುತ್ರರತ್ನವೇ ಶ್ರೀ
ತ್ಯಾಗರಾಜರು. ಜನ್ಮದಿನ ೧೭೬೭ನೇ ಮೇ ಮಾಸ ನಾಲ್ಕನೇ ತಾರೀಖಿಗೆ ಸರಿಯಾದ ಸರ್ವಜಿತ್
ಸಂವತ್ಸರದ ಚೈತ್ರ ಶುಕ್ಲಪಂಚಮಿ, ಅವರ ಮಾತಾಪಿತೃಗಳು ಆಂಧ್ರದ ಹಳ್ಳಿಯೊಂದರಿಂದ ವಲಸೆ ಬಂದು
ತಿರುವಾರೂರಿನಲ್ಲಿ ನೆಲಸಿದವರು. `ಕಾಕರ್ಲ' ಎಂಬುದು ವಂಶನಾಮ. ಮುಲಕನಾಡು ಎಂಬ ವಿಶಿಷ್ಟ
ಪಂಗಡಕ್ಕೆ ಸೇರಿದ ಸ್ಮಾರ್ತ ಬ್ರಾಹ್ಮಣ ಕುಲದವರು. ತ್ಯಾಗರಾಜರ ಮಾತಾಮಹ ರಾದ
ಗಿರಿರಾಜಬ್ರಹ್ಮರ ವಾಸಸ್ಥಳವೂ ತಿರುವಾರೂರೇ ಆಗಿತ್ತು. ಬೆಳೆಯುತ್ತಿರುವ ಮಗನ
ಪುರೋಬಿsವೃದ್ಧಿಯ ದೃಷ್ಟಿಯಿಂದ ಸಂಸಾರವನ್ನು ತಂಜಾವೂರಿಗೆ ಏಳು ಮೈಲಿ ದೂರದಲ್ಲಿರುವ
ತಿರುವಯ್ಯಾರಿನಲ್ಲಿ ಹೂಡಬೇಕಾಯಿತು. ತಿರುವಯ್ಯಾರು ತಿರುವಾರೂರಿನಂತೆ ಒಂದು ಪವಿತ್ರ
ಕ್ಷೇತ್ರ. ಅದಕ್ಕೆ ಪಂಚನದ ಕ್ಷೇತ್ರವೆಂದು ಹೆಸರು. ಕಾವೇರಿನದಿ, ಪ್ರಣತಾರ್ತಿಹರ ದೇವಾಲಯ
ಧರ್ಮಸಂವದಿsನಿ ಮತ್ತಿತರ ದೇವಮಂದಿರಗಳು ಊರಿನ ಆಕರ್ಷಕ ಸ್ಥಳಗಳು. ಅಲ್ಲದೆ ನದೀ ತೀರದಲ್ಲಿ
ವಿರಾಜಿಸುವ ಅಗ್ರಹಾರಗಳು ನಾಡಿನ ಸಂಸ್ಕೃತಿ ಕೇಂದ್ರಗಳು. ಸಂಗೀತ ಸಾಹಿತ್ಯ ಅಲಂಕಾರ ತರ್ಕ
ಮೀಮಾಂಸಾದಿಶಾಸ್ತ್ರಗಳಲ್ಲಿ ಪರಿಣತಿ ಗಳಿಸಿದ್ದ ಕುಟುಂಬಗಳು ನೆಲೆಸಿದ್ದ ಪ್ರದೇಶಗಳು.
ವೈದಿಕ ಸಂಪ್ರದಾಯ ನಿಷ್ಠರಾದ ರಾಮಬ್ರಹ್ಮರೇ ತ್ಯಾಗರಾಜರ ಪ್ರಥಮ ಗುರು ಗಳು. ಸ್ವಯಂ
ಕುಶಾಗ್ರಮತಿಗಳಾದ ತ್ಯಾಗರಾಜರು ಪರಿಸರ ಪ್ರಭಾವದಿಂದಲೂ ಉನ್ನತ ಶಿಕ್ಷಣ ದಿಂದಲೂ ಉತ್ತಮ
ಸಂಸ್ಕಾರ ಪಡೆದರು.
ತಂದೆ ರಾಮಬ್ರಹ್ಮರು ತಿರುವಯ್ಯಾರಿನಲ್ಲಿ ಸಂಸ್ಕೃತ ಶಿಕ್ಷಣವನ್ನೊದಗಿಸಿ ಕಾವ್ಯನಾಟಕ
ಗಳಲ್ಲಿ ವಿದ್ವತ್ತು ಗಳಿಸಲು ಅವಕಾಶ ಮಾಡಿಕೊಟ್ಟರು. ನಿಶಿತಮತಿಗಳಾದ ತ್ಯಾಗರಾಜರು ವೇದ
ವೇದಾಂಗಗಳಲ್ಲಿಯೂ ಪುರಾಣೇತಿಹಾಸಗಳಲ್ಲಿಯೂ ಪರಿಣತರಾದರು. ದಿನನಿತ್ಯವೂ ತಪ್ಪದೇ ರಾಮಾಯಣ
ಪಾರಾಯಣಮಾಡುತ್ತಾ ಉತ್ಕಟವಾದ ರಾಮಭಕ್ತಿಯನ್ನು ಬೆಳೆಸಿಕೊಂಡರು.
ಸೊಂಟಿ ವೆಂಕಟರಮಣಯ್ಯನವರೆಂಬ ತಂಜಾವೂರ ಆಸ್ಥಾನ ವಿದ್ವಾಂಸರಲ್ಲಿ ಶಿಷ್ಯವೃತ್ತಿಮಾಡಿ
ಸಂಗೀತಶಾಸ್ತ್ರದ ರಹಸ್ಯಗಳನ್ನು ರಕ್ತಗತಮಾಡಿಕೊಂಡರು. ಈ ಮಧ್ಯೆ ರಾಮಕೃಷ್ಣಾನಂದರೆಂಬ
ಯತಿಗಳಿಂದ ರಾಮತಾರಕ ಮಂತ್ರೋಪದೇಶವಾಯಿತು. ೯೬ ಕೋಟಿ ರಾಮನಾಮಜಪವನ್ನು ಇಪ್ಪತ್ತೊಂದು
ವರ್ಷಗಳ ಅವದಿsಯಲ್ಲಿ ಮಾಡಿ ಮುಗಿಸಿದರು. ಅದು ಮುಗಿಯುತ್ತಿರು ವಂತೆಯೇ ರಾಮಲಕ್ಷ್ಮಣರು
ಯಜ್ಞರಕ್ಷಣೆಗಾಗಿ ವಿಶ್ವಾಮಿತ್ರರನ್ನು ಹಿಂಬಾಲಿಸಿ ಹೋಗುತ್ತಿರುವ ದೃಶ್ಯ ಅವರ
ಚಿತ್ತಭೂಮಿಕೆಯಲ್ಲಿ ಮೂಡಿ ಕ್ಷಣಾರ್ಧದಲ್ಲಿ ಅದೃಶ್ಯವಾಯಿತು. ಆಗ ಆಶುವಾಗಿ ಹೊರಬಂದದ್ದು
``ಏಲ ನೀ ದಯ ರಾದು'' ಎಂಬ ಅಠಾಣರಾಗದ ಕೃತಿ. ಇದು ತ್ಯಾಗರಾಜರ ಪ್ರಪ್ರಥಮವಾದ ರಚನೆ ಎಂದು
ಹೇಳುತ್ತಾರೆ. ಈ ರಚನೆಯಲ್ಲಿ ಕಾಣುವ ಶಬ್ದಲಾಲಿತ್ಯ, ರಮಣೀಯವಾದ ಸಮಾಸೋಕ್ತಿ,
ಪ್ರಾಸಾನುಪ್ರಾಸಗಳ ಮಾಧುರ್ಯ ಚೇತೋಹಾರಿಯಾದದ್ದು. ಇದೊಂದು ಪ್ರೌಢಕಾವ್ಯ ಎನ್ನಬಹುದು.
ಇಲ್ಲಿ ಪ್ರಯುಕ್ತವಾಗಿರುವ `ಬುಧಜನ ವಿಹಾರ', `ಸಕಲ ಶ್ರುತಿಸಾರ', `ಅಜಜನಕ',
`ಆದ್ಯಂತರಹಿತ', ಆಗಮಾಂತಚರ `ರಾಗರಹಿತ' ಮುಂತಾದ ಪದಪುಂಜಗಳು ಶ್ರೀರಾಮನು ಉಪನಿಷತ್ತು
ಪ್ರತಿಪಾದಿಸುವ ಪರಬ್ರಹ್ಮ ವಸ್ತುವೇ ಎಂಬುದನ್ನು ವಿಶದಪಡಿಸುತ್ತವೆ. ಇಲ್ಲಿಂದ ಪ್ರಾರಂಭ
ತ್ಯಾಗರಾಜರ ಕೃತಿರಚನೆಯ ಸುವರ್ಣಾಧ್ಯಾಯ.
ಪ್ರತಿಯೊಬ್ಬ ಮಾನವನೂ ತನ್ನ ಹುಟ್ಟನ್ನು ಸಾರ್ಥಕಪಡಿಸಿಕೊಳ್ಳುವುದು ಆತನ ಪ್ರಥಮ
ಕರ್ತವ್ಯ. ಜನ್ಮತರಣೋಪಾಯಕ್ಕಾಗಿ ಯತ್ನಿಸದವನು ಆತ್ಮಘಾತುಕನು. ಇದು ಶ್ರೀಶಂಕರ ಭಗವತ್ಪಾದರ
ನುಡಿ. ಆತ್ಮೋದ್ಧಾರ ಮಾರ್ಗವಾದರೋ ವೇದೋಕ್ತವಾದದ್ದು. ವೇದದ ವಿದಿs ನಿಷೇಧಗಳನ್ನು
ಪಾಲಿಸುವುದು ಕಲಿಯುಗದಲ್ಲಿ ದುಸ್ಸಾಧ್ಯವಾದದ್ದು. ಈ ಕಷ್ಟವನ್ನು ನಿವಾರಿಸಿ
ಭಕ್ತಿಮಾರ್ಗದಿಂದ ಮುಕ್ತಿಯನ್ನು ಕಂಡುಕೊಳ್ಳಬಹುದೆಂಬುದನ್ನು ತಿಳಿಸಿಕೊಟ್ಟ ಮಹಾನುಭಾವರು
ತ್ಯಾಗರಾಜರು. ತ್ಯಾಗರಾಜರ ಭಕ್ತಿ ನಾದೋಪಾಸನೆಯ ಮೂಲಕ ಹರಿದು ಅವರನ್ನು ಮುಕ್ತಿ
ಪದವಿಗೇರಿಸಿತು. ನಾದೋಪಾಸನೆಯಿಂದ ಮುಕ್ತಿಯನ್ನು ಗಳಿಸಬಹುದೆಂಬ ನಿಶ್ಚಲವಾದ ನಂಬಿಕೆ ಯನ್ನು
ಅನೇಕ ರಚನೆಗಳಲ್ಲಿ ವ್ಯಕ್ತಪಡಿಸಿದ್ದಾರೆ. ಪರಮೇಶ್ವರನನ್ನು ನಾದಶರೀರಿಯೆಂದು ವರ್ಣಿಸಿ
ದ್ದಾರೆ. (ನಾದ ತನುಮನಿಶಂ-ಚಿತ್ತ ರಂಜನಿ) ನಾದವಿದ್ಯೆ ಹರಿಹರಬ್ರಹ್ಮಾದಿಗಳಿಗೂ ಮಾನ್ಯ
ವಾದದ್ದು ಎಂಬುದಾಗಿ ಕೀರ್ತಿಸಿದ್ದಾರೆ (ನಾದೋಪಾಸಚೇ-ಬೇಗಡ). ನಾದದಲ್ಲಿ ಲೀನವಾಗು ವುದೇ
ಬ್ರಹ್ಮಾನಂದ ಎಂದು ಕೀರ್ತಿಸಿದ್ದಾರೆ. (ನಾದಲೋಲುಡೈ-ಕಲ್ಯಾಣ ವಸಂತ). ಸಂಗೀತ ಜ್ಞಾನದಿಂದ
ಇಹಪರಗಳೆರಡನ್ನೂ ಸಾದಿsಸಬಹುದೆಂದು ಉತ್ತೇಜಿಸಿದ್ದಾರೆ (ಸಂಗೀತಶಾಸ್ತ್ರ ಜ್ಞಾನಮು-ಮುಖಾರಿ)
ಸಂಗೀತವಿಲ್ಲದೆ ಮೋಕ್ಷವಿಲ್ಲ ಎಂದು ಕೊರಳೆತ್ತಿ ಘೋಷಿಸಿದ್ದಾರೆ (ಮೋಕ್ಷಮು ಗಲದಾ-ಸಾರಮತಿ).
ತ್ಯಾಗರಾಜರ ರಚನೆಗಳು ಜ್ಞಾನಭಕ್ತಿವೈರಾಗ್ಯಗಳ ನಿದಿs. ಅರ್ಥಪುಷ್ಟಿ, ಭಾವಪುಷ್ಟಿ,
ರಸಪುಷ್ಟಿ, ಪದಲಾಲಿತ್ಯ, ಉಪಮಾ, ರೂಪಕ, ಪ್ರಾಸ, ಅನುಪ್ರಾಸಗಳು-ಈ ಕಾವ್ಯಗುಣಗಳಿಂದ
ಶೋಬಿsಸುವ ಜಾಜ್ವಲ್ಯಮಾನವಾದ ರತ್ನಗಳು ಅವರ ಸಂಗೀತ ರಚನೆಗಳು. ಅವುಗಳಲ್ಲಿ ಶಿವ ಗಣೇಶ
ದುರ್ಗ ಷಣ್ಮುಖ ಮೊದಲಾದ ನಾನಾ ದೇವತೆಗಳ ಪರವಾದ ರಚನೆಗಳಿವೆ. ಲೋಕದ ಸ್ವಭಾವ ವರ್ಣನೆ ಇದೆ.
ಮನೋನಿಗ್ರಹದ ಪ್ರಸ್ತಾಪವಿದೆ. ನಿತ್ಯಾನಿತ್ಯ ವಿವೇಕವಿದೆ. ಅಧ್ಯಾತ್ಮಚಿಂತನೆ ಇದೆ. ನವ ವಿಧ
ಭಕ್ತಿಗಳ ಪ್ರತಿಪಾದನೆಯಿದೆ, ಭೋಗಲಾಲಸೆಯ ಖಂಡನೆಯಿದೆ. ಸ್ವಾರ್ಥಸಾಧಕರ ಚಿತ್ರಣವಿದೆ.
ಒಟ್ಟಿನಲ್ಲಿ ವೈವಿಧ್ಯಮಯವಾದ ವಸ್ತುಗಳನ್ನು ಕುರಿತ ಚಿಂತನೆಗಳನ್ನು ತ್ಯಾಗರಾಜರ
ರಚನೆಗಳಲ್ಲಿ ಕಾಣಬಹುದು. ಆದರೂ ಅವರ ರಚನೆಗಳಲ್ಲಿ ತಮ್ಮ ಆರಾಧ್ಯದೈವವಾದ ಶ್ರೀರಾಮನಿಗೂ
ರಾಮಕಥೆಗೂ ಬಹುಪಾಲು. ಅವರು ಶ್ರೀರಾಮನನ್ನು ವಿವಿಧ ಭಂಗಿಗಳಲ್ಲಿ ಕಂಡು ಚಿತ್ರಿಸಿದ್ದಾರೆ.
ಒಮ್ಮೆ ಬಾಲರಾಮನಾಗಿ, ಇನ್ನೊಮ್ಮೆ ರಸಿಕನಾಗಿ, ಮತ್ತೊಮ್ಮೆ ರಾಕ್ಷಸಾಂತಕನಾಗಿ, ಬೇರೊಂದು
ಬಾರಿ ಭಕ್ತಪರಾದಿsನನಾಗಿ, ಸಂದರ್ಭಾಂತರದಲ್ಲಿ ಸಕಲದೇವತಾ ಸಮೂಹವನ್ನೂ ಒಳಗೊಂಡ ಸಾಕ್ಷಾತ್
ಪರಬ್ರಹ್ಮವಸ್ತುವೇ ಆಗಿರುವವನು ತ್ಯಾಗರಾಜರ ರಾಮಚಂದ್ರಪ್ರಭು. ಶ್ರೀರಾಮನ ಈ
ವಿಶ್ವರೂಪದರ್ಶನವನ್ನು ತಮ್ಮ ರಚನೆಗಳಲ್ಲಿ ರಸಿಕರ ಮನೋಮಂದಿರಗಳಲ್ಲಿ ಸ್ಥಾಪಿಸಿದ್ದಾರೆ. ಈ
ಬಗೆಯ ವಿಪುಲವಾದ ಸಾಹಿತ್ಯರಾಶಿಯಲ್ಲಿ ಪಂಚರತ್ನಗಳೆಂಬ ವಿಶಿಷ್ಟವರ್ಗಕ್ಕೆ ಸೇರಿದ ಕೃತಿಗಳೂ,
ದಿವ್ಯನಾಮಗಳು ಮತ್ತು ಉತ್ಸವ ಸಂಪ್ರದಾಯ ಕೀರ್ತನೆಗಳೆಂಬ ಜಾತಿಗೆ ಸೇರಿದ ರಚನೆಗಳೂ,
ಪ್ರಹ್ಲಾದ ಭಕ್ತಿ ವಿಜಯ ಮತ್ತು ನೌಕಾಚರಿತೆ ಎಂಬ ಎರಡು ಗೇಯ ನಾಟಕಗಳೂ ಸೇರಿ ಕಾವ್ಯಮಯವಾದ
ಸಂಗೀತರಸಾಯನವಾಗಿದೆ. ತ್ಯಾಗರಾಜರ ಆಡುಭಾಷೆ ತೆಲುಗು. ಅವರ ರಚನೆಗಳಲ್ಲಿ ಬಹುಭಾಗ ತೆಲುಗು
ಭಾಷೆಯವು. ಸಂಸ್ಕೃತ ಭಾಷೆಯಲ್ಲಿಯೂ ಅವರದು ಪ್ರಗಲ್ಭವಾದ ಪಾಂಡಿತ್ಯ. ಸಂಸ್ಕೃತದಲ್ಲಿ
ರಚಿತವಾಗಿರುವ ಅವರ ಕೃತಿಗಳೂ ಗಣನೀಯ. ಜಗದಾನಂದಕಾರಕ (ನಾಟ), ಸಾಮಜವರಗಮನ (ಹಿಂದೋಳ), ಸುಜನ
ಜೀವನ (ಖಮಾಚ್), ಈಶ ಪಾಹಿ ಮಾಂ (ಕಲ್ಯಾಣಿ), ಕ್ಷೀರಸಾಗರ ವಿಹಾರ (ಆನಂದ ಭೈರವಿ),
ನಾದತನುಮನಿಶಂ (ಚಿತ್ತರಂಜನಿ), ನಿರವದಿs ಸುಖದ (ರವಿಚಂದ್ರಿಕಾ), ದೇವಾದಿ ದೇವ
(ಸಿಂಧುರಾಮಕ್ರಿಯ), ದೇಹಿ ತವಪದಭಕ್ತಿಂ (ಶಹನ), ಗಿರಿರಾಜಸುತಾತನಯ (ಬಂಗಾಳ), ಪಾಹಿ
ರಾಮದೂತ (ವಸಂತವರಾಳಿ) ಇವೇ ಮೊದಲಾದವು ಅವರ ಪ್ರಸಿದ್ಧವಾದ ಸಂಸ್ಕೃತ ರಚನೆಗಳಲ್ಲಿ ಕೆಲವು.
ತೆಲುಗು ಮತ್ತು ಸಂಸ್ಕೃತಭಾಷೆಗಳ ಮೇಲೆ ಅಪಾರವಾದ ಪ್ರಭುತ್ವವನ್ನು ಸಾದಿsಸಿದ್ದವರು
ಶ್ರೀತ್ಯಾಗರಾಜರು. ಭಾಷೆಯ ಮರ್ಜಿ ಮತ್ತು ನುಡಿಗಟ್ಟನ್ನು ಬಲ್ಲ ಅವರಿಗೆ ಅಂತರಂಗದ
ಸೂಕ್ಷ್ಮಭಾವನೆಗಳನ್ನು ಪರಿಣಾಮಕರವಾಗಿ ಅಬಿsವ್ಯಂಜಿಸುವ ಕಲೆ ರಕ್ತಗತವಾಗಿತ್ತು. ಅವರ
ಮಾತುಗಳು ದ್ರಾಕ್ಷಾಪಾಕ, ಅವರ ಪದಬಂಧ ಓಜೋಗುಣವುಳ್ಳದ್ದು. ಎಲ್ಲಿಯೂ ಗಡುಸಿಲ್ಲ. ಎಲ್ಲಿಯೂ
ಪೆಡುಸಿಲ್ಲ. ಅವರದು ಕವಿಹೃದಯ. ಆದುದರಿಂದ ಅವರ ರಚನೆಗಳು ಕಾವ್ಯಪ್ರಭೆ ಯಿಂದ ಬೆಳಗುವ
ದಿವ್ಯದೀಪಗಳು. ಶ್ರೀತ್ಯಾಗರಾಜರು ಸಂಗೀತ ಸರಸ್ವತಿಯಾಗಿದ್ದಂತೆ ಶಬ್ದ ಬ್ರಹ್ಮರೂ
ಆಗಿದ್ದರೆಂಬುದು ಗಣನೀಯವಾದ ವಿಶೇಷ. ಸರಸ್ವತಿಯನ್ನು ``ಪಲುಕುಲ ಚೆಲಿಯ'' (ಮಾತಿನ ಹೆಣ್ಣು)
ಎಂದು ವರ್ಣಿಸಿದ್ದಾರೆ (ಕೊಲುವರೆಗದ ತೋಡಿ). ಶುಕ್ರವಾರಕ್ಕೆ ಪರ್ಯಾಯ ನಾಮವಾಗಿ ``ದನುಜ
ಗುರುವಾಸರ'' (ದನುಜಗುರು-ರಾಕ್ಷಸರ ಗುರು-ಶುಕ್ರಚಾರ್ಯರು) (ದಾರಿನಿ
ತೆಲುಸುಕೊಂಟಿ-ಶುದ್ಧಸಾವೇರಿ) ಬಳಸಿದ್ದಾರೆ. ಅವರ ಸಂಸ್ಕೃತ ಸಮಾಸೋಕ್ತಿಗಳು ಅವರು
ಗಳಿಸಿದ್ದ ಶಬ್ದ ಚಮತ್ಕೃತಿ ಸಾಧನೆಗೆ ನಿದರ್ಶನಗಳು. ``ದ್ಯುತಿಜತಶರದಭ್ರ'' (ನಾರದ ಗುರು
ಸಾಮಿ-ದರ್ಬಾರ್), ಸದಾಗತಿಜ ಧೃತಪದ (ಏಲ ನೀ ದಯರಾದು-ಅಠಾಣ), ಸುರಸಾರಿಪುಕರಾಬ್ಜ
ಲಾಲಿತಚರಣವಾಸವರಿಪು ಜನಕಾಂತಕ (ಜಗದಾನಂದಕಾರಕ-ನಾಟ), ವಿಮುಖಾಂಬುಧರ ಪವನ
(ಕನಕನರುಚಿರಾ-ವರಾಳಿ), ಶ್ರೀವನಿತಾ ಚಿತ್ತ ಕುಮುದ ಶೀತಕರ (ಲಾವಣ್ಯರಾಮ-ಪೂರ್ಣ ಷಡ್ಜ).
ಇಂತಹ ಹಲವಾರು ನಿದರ್ಶನಗಳನ್ನು ತ್ಯಾಗರಾಜರ ರಚನೆಗಳಲ್ಲಿ ಕಾಣಬಹುದು. ತ್ಯಾಗರಾಜರ
ರಚನೆಗಳಲ್ಲಿ ಮನಸ್ಸನ್ನು ಹಿಡಿಯುವ ಮತ್ತೊಂದು ವಿಷಯವನ್ನು ಗಮನಿಸಬೇಕು. ಅವರು ಜೀವನವನ್ನು
ಕೂಲಂಕಷವಾಗಿ ಬಲ್ಲವರು. ಲೋಕದ ಸ್ವಭಾವ ಅವರಿಗೆ ಸಮಗ್ರವಾಗಿ ಪರಿಚಿತವಾದದ್ದು. ಮಾನವನ
ಹೃದಯದ ಧ್ವನಿ ಮರುದನಿಗಳನ್ನೂ ಗುಣಾವ ಗುಣಗಳನ್ನೂ ಚನ್ನಾಗಿ ಅರಿತವರು. ನಿತ್ಯ ಬದುಕಿನಲ್ಲಿ
ಸಮಸ್ಯೆಗಳನ್ನು ಎದುರಿಸಿದವರು. ಈ ನಾನಾ ಬಗೆಯಾದ ಅನುಭವಗಳು ಅವರ ರಚನೆಗಳಲ್ಲಿ ಲೋಕರೂಡಿsಯ
ಮಾತುಗಳಾಗಿ ಕಾಣಿಸಿಕೊಂಡಿವೆ. ಈ ಲೋಕೋಕ್ತಿಗಳ ಬಳಕೆಯಿಂದ ಅವರ ರಚನೆಗಳಿಗೆ ಅರ್ಥಪುಷ್ಟಿ
ಸಂದಿದೆ ಎಂಬುದು ಸ್ವಾರಸ್ಯಕರವಾದ ಸಂಗತಿ. ಈ ಕೆಳಗಿನ ಉಲ್ಲೇಖಗಳು ಅವರ ಲೋಕಜ್ಞಾನಕ್ಕೆ
ಹಿಡಿದ ಕೈಗನ್ನಡಿ -
೧. ಪಾಲ ಮುಂಚಿನ ನೀಟ ಮುಂಚಿನ ಪದಮುಲೇ ಗತಿ (ಭುವಿನಿದಾಸುಡನಿ-ಶ್ರೀರಂಜನಿ)
(ಹಾಲಿನಲ್ಲಾದರೂ ಮುಳುಗಿಸು ನೀರಿನಲ್ಲಾದರೂ ಮುಳುಗಿಸು-ನಿನ್ನ ಪಾದವೇ ಗತಿ)
೨. ದುತ್ತ ಪಾಲು ರುಚಿ ಎದುಗು ಸಾಮ್ಯಮೆ. (ಎಂತ ಮುದ್ದೋ ಎಂತ ಸೊಗಸೋ-ಬಿಂದುಮಾಲಿನಿ)
(ಹಾಲಿನ ರುಚಿ ಪಾತ್ರೆ ಬಲ್ಲುದೆ ?)
೩. ಚೆವಿಟಿಕಿ ಉಪದೇಶಿಂಚಿನಟು (ಮನಸು ವಿಷಯ ನಟ-ನಾಟಕುರಂಜಿ) (ಕಿವುಡನಿಗೆ ಮಂತ್ರೋಪದೇಶ
ಮಾಡಿದಂತೆ)
೪. ಅರಚೇತಿ ಪುಂಟಕದ್ದಮುವಲೆ (ತೊಲಿಜನ್ಮ-ಬಿಲಹರಿ) (ಅಂಗೈ ಹುಣ್ಣಿಗೆ ಕನ್ನಡಿಯೆ ?)
೫. ಕನುಸಂಜ್ಞಕು ರಾನಿ ಕಾಂತನು ಬಲಿಮಿನಿ ವಶಮೌನೇ ? (ನೀ ಕೇ ದಯ ರಾಕ-ನೀಲಾಂಬರಿ)
(ಕಣ್ಣು ಸನ್ನೆಗೆ ಒಲಿಯದ ಹೆಣ್ಣು ಬಲಾತ್ಕಾರಕ್ಕೆ ಒಲಿದಾಳೆ)
೬. ಬಂಗಾರು ಬಾಗುಗಾ ಪದಿವನ್ನೆಗಾಕುಂಟೆ ಯಂಗರಾರ್ಚುಚು ದತ್ತುನಾಡು ಕೋನೇಲ ? (ಮೀವಲ್ಲ
ಗುಣದೋಷವೇ-ಕಾಪಿ) (ಚಿನ್ನದ ಗುಣ ಮಟ್ಟಸದ್ದಾದರೆ ಚಿನಿವಾರನ ತಪ್ಪೆ ?)
ಈ ಬಗೆಯ ಅನೇಕ ಲೋಕೋಕ್ತಿಗಳನ್ನು ಯುಕ್ತವರಿತು ಅರ್ಥವತ್ತಾಗಿ ಬಳಸಿಕೊಂಡಿದ್ದಾರೆ.
ಈಗಾಗಲೇ ನೋಡಿರುವಂತೆ ತ್ಯಾಗರಾಜರ ರಚನೆಗಳಲ್ಲಿ ರಾಮಚರಿತಾಮೃತವಿದೆ. ಶ್ರೀರಾಮನ ರೂಪ
ಶೀಲಗುಣ ವೈಭವವಿದೆ, ಮಾನವನ ಮನೋ ವಿಶ್ಲೇಷಣೆಯಿದೆ, ಸಮಾಜದಲ್ಲಿ ಕಂಡು ಬರುವ ಗುಣದೋಷ
ವಿಮರ್ಶೆಯಿದೆ, ಭಕ್ತರ ವೇಷ ಧರಿಸಿ ಜನರನ್ನು ಮೋಸಗೊಳಿಸುವ ಸ್ವಾರ್ಥಸಾಧಕರ ಖಂಡನೆ ಇದೆ.
ನಾದೋಪಾಸನೆಯ ಮಹತ್ವವನ್ನು ಕುರಿತ ವ್ಯಾಖ್ಯಾನವಿದೆ.
ಎಲ್ಲಕ್ಕೂ ಮಿಗಿಲಾಗಿ ಅಧ್ಯಾತ್ಮಚಿಂತನೆಯಿದೆ, ವೇದಾಂತ ದರ್ಶನವಿದೆ, ತ್ಯಾಗರಾಜರು
ಶ್ರೀರಾಮನ ದರ್ಶನವನ್ನು ಪಡೆದು ಕೃತ್ಯರಾದವರೆಂಬುದು ಅವರದೇ ಆದ ಗಿರಿಪೈನೆಲಕೇನ-ಶಹನ,
ಭವನುತ-ಮೋಹನ, ಪರಮಾತ್ಮುಡು-ವಾಗದಿsಶ್ವರಿ, ಪರಿತಾಪಮು-ಮನೋಹರಿ, ಕನುಗೊಂಟನಿ-ಬಿಲಹರಿ
ಮುಂತಾದ ಕೆಲವು ರಚನೆಗಳಿಂದ ತಿಳಿದುಬರುತ್ತದೆ. ತಮ್ಮ ನಿರ್ಯಾಣ ಸಮಯ ಸಮೀಪಿಸುತ್ತಿ
ರುವದನ್ನರಿತು ನಾದಬ್ರಹ್ಮಾನಂದರೆಂಬ ಆಶ್ರಮನಾಮದಿಂದ ಸನ್ಯಾಸದೀಕ್ಷೆಯನ್ನು ಸ್ವೀಕರಿಸಿ
ಪರಾಭವ ಸಂವತ್ಸರ ಪುಷ್ಯ ಬಹುಳ ಪಂಚಮಿ (೬-೧-೧೮೪೭)ಯಂದು ತಮ್ಮ ಪಾರ್ಥಿವ ಶರೀರವನ್ನು
ತ್ಯಜಿಸಿ ವಿಶ್ವಾತ್ಮನಲ್ಲಿ ಲೀನವಾದರು. ಅವರ ಹೆಸರು ಅಮರ. ಅವರ ಸ್ಮೃತಿ ವಚನ ಧಾರೆ ಅಮರ.
ಅವರ ದಿವ್ಯಚೇತನಕ್ಕೆ ``ನಮಸ್ಕುರ್ಮೋ ಯಥಾ ಬಲಂ''.
ಕಾಕರ್ಲಾನ್ವಯಭೂಷಣಂ ಕವಿವರಂ ಕಾಮಾರಿ ಸೇವಾರತಂ | ಸಾಕೇತಾದಿsಪ
ಪಾದ ಪಂಕಜಯುಗಭೃಂಗಂ ಜಗದ್ವಂದಿತಂ ||
ನಾದೋಪಾಸನೆ ಲಬ್ಧ ಶಾಶ್ವತ ಪದಂ ಪಂಚಾಪಗ ಕ್ಷೇತ್ರಿಣಂ |
ವೇದಾಂತಾಮೃತವರ್ಷಿಣಂ ನರವರುಂ ಶ್ರೀತ್ಯಾಗರಾಜಂ ಭಜೇ ||
- ಟಿ. ಎನ್. ಪದ್ಮನಾಭನ್
|