|
ಇತರ ಸಂಗೀತ ಪದ್ಧತಿಗಳೊಂದಿಗೆ ಗಮನಿಸಿದಾಗ ಕರ್ನಾಟಕ ಸಂಗೀತದಲ್ಲಿ ಎದ್ದು ಕಾಣುವ
ಲಕ್ಷಣಗಳು ಇವು.
(೧) ಸಂಗೀತದಲ್ಲಿ ಸಾಹಿತ್ಯಕ್ಕಿರುವ ಪ್ರಾಧಾನ್ಯ
(೨) ಸಂಗೀತ
ಸಾಹಿತ್ಯದಲ್ಲಿ ಕಂಡುಬರುವ ವೈವಿಧ್ಯ ಮತ್ತು ವೈಪುಲ್ಯ
(೩) ಸಂಗೀತ ಸಾಹಿತ್ಯದಲ್ಲಿ ತೋರಿ
ಬರುವ ಲೋಕನೀತಿಯ ಪಾತ್ರ
(೪) ಸಂಗೀತಕ್ಕೂ ಸಾಹಿತ್ಯಕ್ಕೂ ಚೌಕಟ್ಟಾಗಿ ಮೂಡಿ ಬರುವ
ತಾಳವ್ಯವಸ್ಥೆಯಲ್ಲಿ ವೈವಿಧ್ಯ ಮತ್ತು ಸಂಗೀತ ನಿರೂಪಣೆಗೆ ಬಳಸುವ ತಾಳವಾದ್ಯಗಳ ವೈವಿಧ್ಯ
(೫) ಭಕ್ತಿಭಾವ ಹಾಸುಹೊಕ್ಕಾಗಿ ಬರುವುದು
(೬) ರಾಗಗಳಲ್ಲಿ ಘನ, ರಕ್ತಿ, ಮಾರ್ಗಿ, ದೇಶೀ
ಎಂಬ ಭೇದ ಸ್ಪಷ್ಟವಾಗಿ ಕಾಣಿಸಿಕೊಳ್ಳುವುದು
(೭) ಮನೋಧರ್ಮ ಸಂಗೀತ ವಿವಿಕ್ತವಾಗಿ
ವ್ಯಕ್ತವಾಗುವುದು.
ಸಂಗೀತವನ್ನು ಭಾವದ ಭಾಷೆ ಎಂದು ಬಣ್ಣಿಸುವಾಗ ಧಾತುಮಾತುಗಳೆರಡೂ ಬೆರೆತು ಕೊಂಡಿರುವಾಗಲೇ
ಭಾವದ ಅಬಿsವ್ಯಕ್ತಿ ಎಂಬುದನ್ನು ಮರೆಯುವಂತಿಲ್ಲ. ಸಂಗೀತ `ಆಪಾತ ಮಧುರ'ವಾಗಿದ್ದರೆ ಸಾಲದು
; `ಆಲೋಚನಾಮೃತ'ವಾಗಿಯೂ ಇರಬೇಕು. ರಾಗಭಾವವೆಂಬುದು ಸಾಹಿತ್ಯದಿಂದ ಸ್ವತಂತ್ರವಾಗಿಯೇ
ಇರುವುದು ದಿಟ. ಆದರೆ ಸಾಹಿತ್ಯದ ನೆರವಿಲ್ಲದೆ ಅದು ತೋರಿಯಡಗುವ ನೀರಗುಳ್ಳೆ. ಅದರಿಂದ
ಮನಸ್ಸಿಗಾಗಲಿ ಹೃದಯಕ್ಕಾಗಲಿ ಸಂಸ್ಕಾರವಾಗದು. ಮತ್ತು ಮನಸ್ಸಿನ ಸಂಸ್ಕಾರ
ಹೃದಯಸಂಸ್ಕಾರಕ್ಕೆ ಹೆಬ್ಬಾಗಿಲು. ಮನಸ್ಸಿನಲ್ಲಿ ಮಾತು ಮುಖ್ಯ ವಾಗುತ್ತದೆ. ಈ ದೃಷ್ಟಿಯಿಂದ
ಸಾಹಿತ್ಯದ ಸಾಮಗ್ರಿ ಸಂಗೀತದ ಆಸ್ವಾದನೆಗೆ ಅಡಿಪಾಯವಾಗುತ್ತದೆ.
ಇದನ್ನು ಮನಗಾಣಿಸಿದವರು ಪುರಂದರದಾಸರು. ಕರ್ನಾಟಕ ಸಂಗೀತದ ಸ್ವರೂಪೋದ್ಧಾರಕರು
ಎಂಬರ್ಥದಲ್ಲಿ ಸಂಗೀತ ಪಿತಾಮಹರು. ಗೀತ, ಸುಳಾದಿ, ಉಗಾಭೋಗ, ಪದ್ಯ, ಪದವ್ರಾತ ರಚನೆ ಗಳಿಂದ
ಸಂಗೀತದಲ್ಲಿ ಭಾವವನ್ನೂ, ಭಕ್ತಿಯನ್ನೂ, ಲೋಕನೀತಿಯನ್ನೂ ತುಂಬಿಸಿದರು. ಭಾವವನ್ನು ಬಿಟ್ಟು
ಭಕ್ತಿಯಿರದು ; ಭಕ್ತಿಯ ಆಸರೆಯಿರದೆ ಭಾವವೆಲ್ಲಿಯದು ? ಎರಡಕ್ಕೂ ಇಂಬಾಗಿ ಲೋಕ
ನೀತಿಯಿರಬೇಕು. ಮಾನವಜನ್ಮ ದೊಡ್ಡದು ; ಇದನ್ನು ಹಾನಿಮಾಡಿಕೊಳ್ಳುವವರು ಹುಚ್ಚಪ್ಪಗಳು ;
ಅದು ಹಾನಿಯಾಗದೆ ಇರಲು ಸಾಹಿತ್ಯ - ಸಂಗೀತಗಳು ನೆರವಾಗುತ್ತವೆ. ಲೋಕನೀತಿಯ ಗುಟ್ಟು
``ಇರಬೇಕು, ಇರದಿರಬೇಕು'' ; ``ಈಜಬೇಕು, ಈಜಿ ಜಯಿಸಬೇಕು'' ; ಇಹವನ್ನು ನಂಬಿ ಉದ್ಧಾರ
ವಾದವರಿಲ್ಲ, ಪರವನ್ನು ನಂಬಿ ಕೆಟ್ಟವರಿಲ್ಲ ; ಬಾಳುವಾಗ ಬಿಲ್ಲಾಗಿರಬೇಕು,
ಬೆಲ್ಲವಾಗಿರಬೇಕು. ಒಳಗಣ್ಣಿನಿಂದ ಕಾಣಿಸಿಕೊಳ್ಳುವ, ಒಡಲಲ್ಲೆ ನೆಲೆ ನಿಂತಿರುವ ಹರಿಯು
`ಗಾನಲೋಲ'ನೇ, ದಿಟ. ಆದರೆ ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನವನ್ನು ನಂಬಲಾರ.
ಪುರಂದರದಾಸರು (ಜನನ ಕ್ರಿ. ಶ. ೧೪೮೦) ತೋರಿಸಿದ ಈ ದಾರಿಯನ್ನು ಮೆಚ್ಚಿಕೊಂಡು ಅದನ್ನೇ
ಹಿಡಿದವರು ತ್ಯಾಗರಾಜಸ್ವಾಮಿಗಳು (೧೮೪೦). `ಹರಿದಾಸುಲು ವೆಡಲೆ' ಆನಂದದಿಂದ ಕುಣಿದಾಡಿದವರು
ಅವರು. ಎಳವೆಯಲ್ಲೆ ತಾಯಿ ಹಾಡುತ್ತಿದ್ದ ಪುರಂದರದಾಸರ ದೇವರನಾಮಗಳನ್ನೂ ಭದ್ರಾಚಲ ರಾಮದಾಸರ
ಪದಗಳನ್ನೂ ಕೇಳಿಸಿಕೊಂಡು ಹೃದಯಸಂಸ್ಕಾರವನ್ನು ಮೂಡಿಸಿಕೊಂಡವರು ಅವರು. ಹೀಗೆಂದು ಅವರ
ಪಟ್ಟಶಿಷ್ಯ ವೆಂಕಟರಮಣಭಾಗವತರೇ ಬರೆದಿಟ್ಟಿದ್ದಾರೆ. ತ್ಯಾಗರಾಜರು ತಾವೇ ಪ್ರಹ್ಲಾದ
ಭಕ್ತಿವಿಜಯದಲ್ಲಿ -
`ದುರಿತಮುಲೆಲ್ಲನು ಪರಿಮಾರ್ಚೆಡಿ ಹರಿಗುಣಮುಲ ಪಾಡುಚನೆಪುಡನ್ | ಪರವಶುಡೈವಯು
ಪುರಂದರದಾಸುನಿ ಮಹಿಮನ ನೇ ದಲಚೆದನ್ ಮದಿಲೋನ'
ಎಂದು ಪುರಂದರದಾಸರು ತಮ್ಮ ಮೇಲೆ ಮೂಡಿಸಿದ ಪ್ರಭಾವವನ್ನು ಉಲ್ಲೇಖಿಸಿದ್ದಾರೆ.
ಈ ಪ್ರಭಾವದ ಪರಿಯನ್ನು ಅರಿತುಕೊಳ್ಳಬೇಕೆಂದರೆ ಸಂಗೀತದಲ್ಲಿ ಸಾಹಿತ್ಯದ ಪಾತ್ರವನ್ನು
ಪ್ರೋತ್ಸಾಹಿಸಿದವರಲ್ಲಿ ಪುರಂದರದಾಸರೇ ಮೊದಲಿಗರು ಎಂಬುದನ್ನು ಗಮನಿಸಬೇಕು. ಈಗ ಎಲ್ಲರಿಗೂ
ತಿಳಿದಿರುವಂತೆ ಮಾಯಾಮಾಳವಗೌಳ ರಾಗದಲ್ಲಿ ಸ್ವರಾವಳಿಗಳನ್ನು (ಎಂದರೆ ಸರಳಿವರಸೆ,
ಜಂಟಿವರಸೆ, ದಾಟುವರಸೆಗಳನ್ನೂ ಮಂದ್ರ, ತಾರಸ್ಥಾಯಿಗಳ ವರಸೆಗಳನ್ನು) ಸ್ವರಾಲಂಕಾರ,
ತಾಳಾಲಂಕಾರಗಳನ್ನು ಅಭ್ಯಾಸಗಾನದ ಮೊದಲ ಹಂತವಾಗಿ ರಚಿಸಿದ ನಂತರ ಮಾಯಾಮಾಳವಗೌಳ ರಾಗದ
ಉಪಾಂಗಜನ್ಯ ರಾಗವಾದ ಮಲಹರಿಯಲ್ಲಿ ಸಾಹಿತ್ಯವನ್ನು ಸ್ವರಕ್ಕೆ ಹೊಂದಿಸಿ ನಾಲ್ಕು
ಪಿಳ್ಳಾರಿಗೀತೆಗಳನ್ನು (`ಲಂಬೋದರ ಲಕುಮಿಕರ' ಮೊದಲಾದುವು) ರಚಿಸಿದ್ದು ಕರ್ನಾಟಕಸಂಗೀತದ
ಜಾಯಮಾನವನ್ನು ಸಿದ್ಧಪಡಿಸಿತು.
ಅಷ್ಟುಮಾತ್ರವಲ್ಲ, ಅವರ ಕೃತಿಗಳಲ್ಲಿ ಇಪ್ಪತ್ತೇಳು ರಾಗಗಳ ಪ್ರಸ್ತಾಪ (ಮಾರವಿಯಿಂದ
ಕುರಂಜಿಯವರೆಗೆ, `ನಳಿನಜಾಂಡ' ಕೃತಿಯಲ್ಲಿ) ಇರುವುದನ್ನೂ ಗಮನಿಸಬೇಕು. `ಕುಣಿದಾಡೋ ರಂಗ'
ಎಂಬ ಕೃತಿ ಘನರಾಗಮಾಲಿಕೆ ಎಂಬುದನ್ನು ಮರೆಯುವಂತಿಲ್ಲ. ಹಲವು ರಾಗಗಳಿಗೆ ಸ್ವರೂಪ
ನಿರ್ಧಾರಮಾಡಿದವರು ಅವರೇ. `ಪೋಗದಿರೆಲೋ ರಂಗ' (ಶಂಕರಾಭರಣ), `ದಾಸನ ಮಾಡಿಕೋ ಎನ್ನ'
(ನಾದನಾಮಕ್ರಿಯೆ), `ಆಡಿದನೋ ರಂಗ' (ಆರಬಿs), `ಈ ಪರಿಯ ಸೊಬಗಾವ ದೇವರಲಿ ಕಾಣೆ'
(ಕಾಂಬೋಜಿ), `ಓಡಿಬಾರಯ್ಯ, ವೈಕುಂಠಪತಿ' (ಭೈರವಿ), `ನಾ ನಿನ್ನ ಧ್ಯಾನದೊಳಿರಲು'
(ಕಾನಡಾ), `ಭಾಗ್ಯದ ಲಕ್ಷ್ಮಿ ಬಾರಮ್ಮ' (ಮಧ್ಯಮಾವತಿ) ಇವೆಲ್ಲ ನಿದರ್ಶನಗಳು.
ಅವರ ಸಂಗೀತದ ಪ್ರಭಾವಕ್ಕಿಂತ ಹೆಚ್ಚಾಗಿ ಅವರ ಸಾಹಿತ್ಯದ ಪ್ರಭಾವ ತ್ಯಾಗರಾಜಸ್ವಾಮಿ ಗಳ
ಮೇಲೆ ಬಿದ್ದಿತಾಗಿ ಕರ್ನಾಟಕಸಂಗೀತದ ಮುಖ್ಯ ಲಕ್ಷಣಗಳಾದ ಭಕ್ತಿಭಾವ ಮತ್ತು ಲೋಕ ನೀತಿ
ಇವೆರಡೂ ಊರ್ಜಿತವಾದುವು. ಪುರಂದರದಾಸರ ಅನೇಕ ಕೃತಿಗಳ ಭಾವವನ್ನು ತ್ಯಾಗರಾಜ ಸ್ವಾಮಿಗಳು
ಅನುಭವಿಸಿ ತಮ್ಮದಾಗಿ ಮಾಡಿಕೊಂಡು ಕೃತಿರಚನೆ ಮಾಡಿರುವುದನ್ನು ಕಾಣಬಹುದು. ಅವರ
`ಸಂಗೀತಜ್ಞಾನಮು ಭಕ್ತಿವಿನಾ' (ಧನ್ಯಾಸಿ) ಮತ್ತು ದಾಸರ `ಕೇಳನೋ ಹರಿ ತಾಳನೋ' (ಕಲ್ಯಾಣಿ)
; `ಸ್ಮರಣೇ ಸುಖಮು ರಾಮರಾಮ' (ಜನರಂಜಿನಿ) ಮತ್ತು `ಸ್ಮರಣೆಯೊಂದೆ ಸಾಲದೆ' (ಅಠಾಣ) ;
`ಎಂದುಕು ನಿರ್ದಯ, ಎವರುನ್ನಾರುರಾ' (ಹರಿಕಾಂಬೋಜಿ) ಮತ್ತು `ಯಾಕೆ ನಿರ್ದಯನಾದೆ ಎಲೊ
ದೇವನೆ' (ಕಾಂಬೋಜಿ) ; `ಗುರುಲೇಕ ಇಟುವಂಟಿ ಗುಣಿಕಿ' (ಗೌರೀ ಮನೋಹರಿ) ಮತ್ತು `ಗುರುವಿನ
ಗುಲಾಮನಾಗುವತನಕ' (ಜಂಝೂಟಿ) ; `ಎವರೂರಾ ನಿನು ವಿನಾ ಗತಿ ಮಾಕು' (ಮೋಹನ) ಮತ್ತು
`ಯಾರಿದ್ದರೇನಯ್ಯ ನೀನಲ್ಲದೆನಗಿಲ್ಲ' (ಮೋಹನ), `ಸೊಗಸುಗಾ ಮೃದಂಗ' (ಶ್ರೀರಂಜಿನಿ) ಮತ್ತು
`ತಾಳಬೇಕು, ತಕ್ಕ ಮೇಳಬೇಕು' (ಚಕ್ರವಾಕ) ಮೊದಲಾದ ಕೃತಿಗಳಲ್ಲಿ ಕಂಡುಬರುವ ಭಾವಸಾದೃಶ್ಯ
ಆಕಸ್ಮಿಕವೆನ್ನುವಂತಿಲ್ಲ.
ಪುರಂದರದಾಸರು ನಾರದರ ಅವತಾರವೆಂದು ನಂಬುಗೆ. ತ್ಯಾಗರಾಜಸ್ವಾಮಿಗಳ ಕಾಲ ದಲ್ಲೂ ಇದು
ಪ್ರಚಲಿತವಾಗಿದ್ದಿರಬೇಕು. ನಾರದರನ್ನು ಸಂಬೋದಿsಸಿ ತ್ಯಾಗರಾಜಸ್ವಾಮಿಗಳು ಐದು ಕೃತಿಗಳನ್ನು
ರಚಿಸಿದ್ದಾರೆ. ಅವುಗಳಲ್ಲಿ ಅವರನ್ನು `ಗುರುಸ್ವಾಮಿ', `ಗುರುರಾಯ' ಎಂದೇ
ಗುರುತಿಸಿದ್ದಾರೆ. `ನಾರದಮುನಿ ವೆಡಲಿನ' ಎಂಬೊಂದು ಕೃತಿಯನ್ನೂ `ಹರಿದಾಸುಲು ವೆಡಲೆ' ಎಂಬ
ಇನ್ನೊಂದು ಕೃತಿಯನ್ನೂ ಒಟ್ಟಿಗೆ ಗಮನಿಸಿದಾಗ, ತ್ಯಾಗರಾಜಸ್ವಾಮಿಗಳ ಮನಸ್ಸಿನಲ್ಲಿ ನಾರದ
ರೆಂದರೆ ಪುರಂದರದಾಸರ ಚಿತ್ರವೇ ಮೂಡಿಕೊಂಡಿರಬೇಕೆನಿಸುತ್ತದೆ. `ಸಂಗೀತಯೋಗ ನೈಗಮ
ಪಾರಂಗತುಡೈನ' ಎಂಬ ವರ್ಣನೆ, `ವರ ನಾರದ ನಾರಾಯಣ ಸ್ಮರಣಾನಂದಾನುಭವಮುಗಲ' ಎಂಬ ಒಕ್ಕಣೆಗಳು
ಇದಕ್ಕೆ ಇಂಬುಕೊಡುತ್ತವೆ. ಪುರಂದರದಾಸರಿಗೂ ತ್ಯಾಗರಾಜಸ್ವಾಮಿಗಳಿಗೂ ಸಂಗೀತವೆಂದರೆ
ಆಧ್ಯಾತ್ಮಿಕ ಸಾಧನೆಯೇ. ನಾದೋಪಾಸನೆಗೆ ಒಲಿದವರು. ಇಬ್ಬರೂ ಭಾಗವತಧರ್ಮಕ್ಕೆ ಸೇರಿದವರು ;
ಊಂಛವೃತ್ತಿಯನ್ನೇ ಹಿಡಿದವರು ; ರಾಜಾಶ್ರಯವನ್ನು ನಿರಾಕರಿಸಿದವರು. ವಿರಕ್ತರಾದರೂ ಸಂಸಾರದ
ಸ್ವಾರಸ್ಯ ವನ್ನು ಕಂಡುಕೊಂಡವರು. `ಸಂಸಾರವೆಂಬಂಥ ಭಾಗ್ಯವಿರಲಿ' ಎಂದರು ದಾಸರು ;
`ಸಂಸಾರುಲೈ ತೇನೇಮಯ್ಯ ?' ಎಂದು ಕೇಳಿದರು ತ್ಯಾಗರಾಜರು. ಇಬ್ಬರೂ ರಾಮಭಕ್ತರು. ದಾಸರಿಗೆ
`ಅಲ್ಲಿ ನೋಡಲು ರಾಮ, ಇಲ್ಲಿ ನೋಡಲು ರಾಮ, ಎಲ್ಲೆಲ್ಲಿ ನೋಡಲು ರಾಮ !' ; ತ್ಯಾಗರಾಜರಿಗೆ
`ಉಂಡೇದಿ ರಾಮುಡು ಒಗಡು'. ಇಬ್ಬರದ್ದೂ ರಾಮಭಕ್ತಿ ಸಾಮ್ರಾಜ್ಯವೇ.
ಉಳಿದ ಯಾವ ವಾಗ್ಗೇಯಕಾರರನ್ನೂ ಇವರಿಬ್ಬರ ಪಂಕ್ತಿಯಲ್ಲಿ ಸೇರಿಸುವುದು ಸಾಧ್ಯ ವಿಲ್ಲ.
ಕರ್ನಾಟಕಸಂಗೀತದ ಸ್ವರೂಪೋದ್ಧಾರಕರೆಂದರೆ ಇವರೇ. ಸಂಗೀತರಸಿಕರಿಗೆಲ್ಲ ಸರ್ವೋಪ ಜೀವ್ಯರು.
ಇವರಿಬ್ಬರ ಆರಾಧನೆಯನ್ನು ಒಟ್ಟಿಗೆ ಮಾಡುವುದು ಸರಿಯೇ. ಆದರೆ ಆರಾಧನೆ ಮಾಡುವಾಗ ದಾಸರ
`ತಂಬೂರಿ ವಿiಟಿದವ ಭವಾಬ್ಧಿ ದಾಟಿದವ' ಎಂಬ ನುಡಿಯನ್ನೂ ತ್ಯಾಗರಾಜಸ್ವಾಮಿಗಳ `ನಾದಲೋಲುಡೈ
ಬ್ರಹ್ಮಾನಂದಮೊಂದವೆ ಮನಸಾ' ಎಂಬ ಕರೆಯನ್ನೂ ಸ್ಮರಣೆಗೆ ತಂದುಕೊಂಡರೆ ಒಳಿತು.
ಸಂಪ್ರದಾಯಸಂಗೀತದಿಂದ ಐಹಿಕ-ಆಮುಷ್ಮಿಕ ಎರಡೂ ಪ್ರಯೋಜನಗಳಿವೆಯೆಂಬುದನ್ನು ಮನವರಿಕೆ
ಮಾಡಿಕೊಟ್ಟವರು ಅವರಿಬ್ಬರು ವಾಗ್ಗೇಯ ಕಾರರು. ತ್ಯಾಗರಾಜಸ್ವಾಮಿಗಳು ಹೇಳಿದಂತೆ.
`ಯಾಗಯೋಗ ತ್ಯಾಗಭೋಗಫಲಮೊಸಂಗೇ ನಾದಸುಧಾರಸ'
- ವಿದ್ಯಾಲಂಕಾರ, ಶಾಸ್ತ್ರಚೂಡಾಮಣಿ, ಸಂಗೀತ ಕಲಾರತ್ನ ಪ್ರೊ || ಸಾ.
ಕೃ. ರಾಮಚಂದ್ರ ರಾವ್
|