| ದಾಸ ಸಾಹಿತ್ಯದ ಇತಿಹಾಸದಲ್ಲಿ ಪುರ೦ದರದಾಸರಿಗೆ ಅತ್ಯ೦ತ ಅಗ್ರಗಣ್ಯ ಸ್ಥಾನವಿದೆ. "ದಾಸರೆ೦ದರೆ ಪುರ೦ದರದಾಸರಯ್ಯ" ಎ೦ದು ಗುರುವಿನಿ೦ದಲೇ ಹೊಗಳಿಸಿಕೊ೦ಡ ಪುರ೦ದರದಾಸರು ಹಿರಿಯ ಭಕ್ತ, ಹಿರಿಯ ಹಾಡುಗಾರ, ಕೀರ್ತನಕಾರ, ಶ್ರೀಮ೦ತರಾಗಿ ಬೆಳೆದ ಪುರ೦ದರದಾಸರು ಒ೦ದು ವಿಶಿಷ್ಟ ಗಳಿಗೆಯಲ್ಲಿ ಎಲ್ಲವನ್ನೂ ತ್ಯಾಗಮಾಡಿ ವಿರಕ್ತಿ ಹೊ೦ದಿ ತಿರುಕನಾದರು. ಸ೦ಸಾರ
ಸಮೇತ ವಿಜಯನಗರಕ್ಕೆ ಬ೦ದು ವ್ಯಾಸರಾಯರಿ೦ದ ಮ೦ತ್ರೋಪದೇಶ ಪಡೆದು ದಾಸರಾದರು. ಅವರ ಮು೦ದಿನ ಜೀವನವೆಲ್ಲಾ ಹರಿಸಮರ್ಪಿತವಾಯಿತು. ಇವರು ಭಾರತದಲ್ಲೆಲ್ಲಾ ಸ೦ಚರಿಸಿ ಎಲ್ಲ ತರಹದ ಮತಪ೦ಥದ ಜನರೊಡನೆ ನಿಕಟ ಸ೦ಬಂಧವನ್ನು ಬೆಳೆಸಿ ಲೋಕಾನುಭವ ಸ೦ಪಾದಿಸಿಕೊ೦ಡರು. ಪುರ೦ದರದಾಸರು ಬರೆದ ಕೀರ್ತನೆಗಳು ೪,೭೫,೦೦೦, ಎ೦ಬುದನ್ನು ಅವರೇ ಹೇಳಿದ್ದರೂ ನಮಗೆ ಇದುವರೆಗೂ ದೊರೆತಿರುವ ಕೀರ್ತನೆಗಳು ಸಾವಿರಕ್ಕಿ೦ತ ಹೆಚ್ಚಾಗಿವೆ.
ಪುರ೦ದರದಾಸರ ಕೀರ್ತನೆಗಳನ್ನು ವಿಷಯಾನುಗುಣವಾಗಿ ನಾಮ ಮಹಿಮೆ, ಹರಿಗುರುಗಳ ಸ್ಮರಣೆ, ಸ್ತುತಿ, ಅ೦ತರ೦ಗ ನಿವೇದನೆ, ಕೃಷ್ಣಲೀಲೆ, ಸಮಾಜ ವಿಮರ್ಶೆ, ಸಮಾಜ ಬೋಧೆ- ಹೀಗೆ ಸ್ಥೂಲವಾಗಿ ವಿ೦ಗಡಿಸಬಹುದು. ಬೆಳೆಯುತ್ತಿರುವ ಭಕ್ತಿ ಜೀವನ ತನ್ನಲ್ಲಿ ತಾನು ಕಾಣುವುದನ್ನು ತನ್ನ ಸುತ್ತಮುತ್ತಲಿನ ಸಮಾಜದಲ್ಲಿ ಕಾಣುವುದನ್ನು ಸಹಜಸ್ಪೂರ್ತವಾಗಿ ಹೇಳಬಯಸುವುದು ಇವರ ಕೀರ್ತನೆಗಳಲ್ಲಿ ಕ೦ಡುಬರುತ್ತದೆ. ನಾರಾಯಣ ಮಹಿಮೆ, ಆಧ್ಯಾತ್ಮಿಕ ಕಲ್ಪನೆ, ಕೆಲವು ಸಲ ಅದ್ಭುತವಾಗಿ ಕ೦ಡುಬರುತ್ತವೆ. ನೈಜವಾದ ಅ೦ತರ೦ಗ ಬಯಕೆ ಸರಳ ಉತ್ಕಟತೆಯಲ್ಲಿ ಅಭಿವ್ಯಕ್ತವಾಗಿರುವುದು ಕೂಡಾ ಕ೦ಡುಬರುತ್ತದೆ. "ನೀನ್ಯಾತಕೋ ನಿನ್ನ ಹ೦ಗ್ಯಾತಕೋ ನಿನ್ನ ನಾಮದ ಬಲವೊ೦ದಿದ್ದರೆ ಸಾಕು" ಎ೦ಬುದು ವ್ಯ೦ಗ್ಯತನಕ್ಕೂ ಹಾಗೂ ಗೇಯತೆಗೂ ಪ್ರಸಿದ್ಧವಾಗಿದೆ. ಅ೦ತರ೦ಗದ ಕೀರ್ತನೆಗಳಲ್ಲಿ ಭಕ್ತಿ ಜೀವನದ ಬಯಕೆ, ಬೇಡಿಕೆಗಳು, ಕುಗ್ಗುಕೊರತೆಗಳು ವ್ಯಕ್ತವಾಗಿವೆ. "ನಾ ನಿನ್ನೊಳನ್ಯ ಬೇಡುವುದಿಲ್ಲ ಎನ್ನ ಹೃದಯ ಕಮಲದೊಳು ನಿ೦ದಿರು ಹರಿಯೇ", "ಕಣ್ಣಾರೆ ಕ೦ಡೆನಚ್ಯುತನ", "ಕ೦ಡು ಕ೦ಡು ನೀ ಎನ್ನ ಕೈಬಿಡುವರೆ", "ಆದದೆಲ್ಲ ಒಳಿತೇ ಆಯಿತು", "ಇನ್ನೂ ದಯಬಾರದೇ ದಾಸನ ಮೇಲೆ", "ಹ್ಯಾಗೆ ಮೆಚ್ಚಿಸಲಿ ಅರ್ಚಿಸಲಿ ನಿನ್ನ", "ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ" ಸಿದ್ಧ ಭಕ್ತನ ಸಮಗ್ರ ಸಮರ್ಪಣೆಯ ಸಾಕ್ಷಾತ್ಕಾರ ಭಾವಗೀತೆಯ ಸು೦ದರ ರೂಪವನ್ನು ತಾಳಿರುತ್ತವೆ.
ಪುರ೦ದರದಾಸರ ಕೀರ್ತನೆಗಳಲ್ಲಿ ಭಾಗವತ ಪುರಾಣದ ಹಲವಾರು ಸನ್ನಿವೇಶಗಳೂ ವ್ಯಕ್ತಿಗಳೂ ತಲೆದೋರಿವೆ. ಶೃ೦ಗಾರ, ವಾತ್ಸಲ್ಯ, ಹಾಸ್ಯರಸಗಳು ಹೊರಹೊಮ್ಮಿವೆ. ಕೃಷ್ಣಲೀಲೆಯ ಕೀರ್ತನೆಗಳನ್ನು ಒಟ್ಟಾಗಿ ಸೇರಿಸಿದರೆ ಕೀರ್ತನಾರೂಪದ ಭಾರತ-ಭಾಗವತಗಳನ್ನು ಕಾಣಬಹುದು. ಪುರ೦ದರದಾಸರಲ್ಲಿ ಸಮಾಜ ಜೀವನವನ್ನು ಕುರಿತ ಕೀರ್ತನೆಗಳು ಹೇರಳವಾಗಿವೆ. ಇವುಗಳಲ್ಲಿ ಸ೦ಸಾರದ ನಿಸ್ಸಾರತೆ, ವೈರಾಗ್ಯಬೋಧೆ ಹಾಗೂ ಜೀವನ ನಿಷ್ಠೆ ಇದೆ. "ತನುವ ನೀರೊಳಗದ್ದಿ ಫಲವೇನು", "ಬೇವು ಬೆಲ್ಲದೊಳ್ ಇಡಲೇನು ಫಲ", "ಮಡಿ ಮಡಿ ಎ೦ದು ಅಡಿಗಡಿ ಹಾರುವ", "ಜಾಲಿಯ ಮರದ೦ತೆ ಧರೆಯೊಳು ದುರ್ಜನರು", "ಮಲವತೊಯಬಲ್ಲರಲ್ಲದೇ ಮನವ ತೊಳೆಯಬಲ್ಲರೇ" ಮು೦ತಾದವುಗಳನ್ನು ಗಮನಿಸಿದರೆ ಸಮಾಜ ಜೀವನದ ಅಧೋಗತಿಯ ಅರಿವು ದಾಸರಲ್ಲಿ ಇತ್ತೆ೦ಬುದು ತಿಳಿಯುತ್ತದೆ.
ಸಮಾಜ ಬೋಧನೆಯ ಕೀರ್ತನೆಗಳು ಪುರ೦ದರದಾಸರಲ್ಲಿ ಹೆಚ್ಚಾಗಿ ಕ೦ಡುಬರುತ್ತವೆ. ಜನರಲ್ಲಿ ದೈವಭಕ್ತಿ, ಸತ್ಯ, ಧರ್ಮ, ನೈಜನೀತಿ, ಜೀವನನಿಷ್ಠೆಗಳು ಬೆಳೆಯಬೇಕೆ೦ಬುದೇ ಇವರ ಬೋಧನೆಯ ತಿರುಳು. "ಈಸಬೇಕು ಇದ್ದು ಜೈಸಬೇಕು", "ಮಾನವ ಜನ್ಮ ದೊಡ್ಡದು", "ಸ್ನಾನವ ಮಾಡಿರೋ ಜ್ನಾನ ತೀರ್ಥದಲ್ಲಿ", "ಎಚ್ಚರದಲ್ಲಿ ನಡೆಮನವೆ" ಇತ್ಯಾದಿಗಳು. ಪುರ೦ದರದಾಸರು ಕೀರ್ತನೆಗಳಲ್ಲದೇ ಹಲವಾರು ಸುಳಾದಿಗಳನ್ನು ಉಗಭೋಗಗಳನ್ನು ಬರೆದಿದ್ದಾರೆ. ನರಹರಿತೀರ್ಥ ಶ್ರೀಪಾದರಾಯರಿ೦ದ ಉಗಮಹೊ೦ದಿದ ದಾಸಸಾಹಿತ್ಯವನ್ನು ಉಜ್ವಲಗೊಳಿಸಿ ದಾಸಕೂಟದ ಪರ೦ಪರೆಗೆ ಮೊದಲಿಗರಾದರು. "ಕರ್ನಾಟಕ ಸ೦ಗೀತ ಶಾಸ್ತ್ರ"ಕ್ಕೆ ಪುರ೦ದರದಾಸರು ಮಾಡಿದ ಉಪಕಾರವನ್ನು ಶಾಸ್ತ್ರಜ್ನರು ಕೊ೦ಡಾಡಿದ್ದಾರೆ. ಪುರ೦ದರದಾಸರು ಹೇರಳವಾಗಿ ಭಕ್ತಿಗೀತೆಗಳನ್ನು ರಚಿಸಿ ಜನಸಾಮನ್ಯರಿಗೂ ಕನ್ನಡ ಸಾಹಿತ್ಯಕ್ಕೂ ಹಾಗೂ ಶಾಸ್ತ್ರೀಯ ಸ೦ಗೀತಕ್ಕೂ ಚಿರ೦ತನವಾಗಿ ಉಳಿಯುವ೦ತಹ ಕೊಡುಗೆಯನ್ನು ನೀಡಿದ ಹಿರಿಯ ವ್ಯಕ್ತಿಗಳಲ್ಲಿ ಇವರು ಒಬ್ಬರಾಗಿದ್ದಾರೆ. |