|
|
|
|
|
|
ಒಂದನ್ನೇ ತಿಳಿಯಬೇಕು
ಹುಟ್ಟಿದಂದಿನಿಂದ ಬದುಕಿರುವವರೆಗೂ ಪ್ರಪಂಚದಲ್ಲಿ ತಿಳಿಯಬೇಕಾದದ್ದೂ, ಕಲಿಯಬೇಕಾದದ್ದೂ ಇದ್ದೇ ಇದೆ ಎಂಬುದು ನಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈ ಪ್ರಪಂಚದ ಬಗೆಗಿನ ತಿಳಿವಳಿಕೆಯು (ಜ್ಞಾನವು) ಅನೇಕವಿಧವಾಗಿದೆ ಎಂದು ನಮಗೆ ಕಂಡುಬಂದರೂ ಈ ತಿಳಿವಳಿಕೆಯನ್ನು ಕೇವಲ ವ್ಯವಹಾರeನ ವೆಂದೂ, ಇದಕ್ಕಿಂತ ಭಿನ್ನವಾಗಿರುವ eನವನ್ನು ಪರಮಾರ್ಥವಿಚಾರವೆಂದೂ ಉಪನಿಷತ್ತುಗಳಲ್ಲಿ ಸಮಸ್ತ ಜ್ಞಾನರಾಶಿಯನ್ನು ವಿಭಾಗಮಾಡಿರುತ್ತದೆ. ಇವು ಗಳಲ್ಲಿ ವ್ಯವಹಾರeನವು ಮಾತ್ರ ಅನೇಕ ಒಳಪಂಗಡಗಳನ್ನು ಹೊಂದಿದ್ದು `ಉದರನಿಮಿತ್ತಂ ಬಹುಕೃತವೇಷಂ' ಎಂಬಂತೆ ಉದರಭರಣಾರ್ಥವಾಗಿ ಯಾವುದಾದರೂ ಒಂದು eನವನ್ನು ಸರಿಯಾಗಿ ಪಡೆದುಕೊಂಡು ಇಹ ಲೋಕದ ಯಾತ್ರೆಯನ್ನು ನಡೆಸುವ ಪ್ರಯತ್ನವನ್ನು ನಾವೆಲ್ಲರೂ ಮಾಡುತ್ತಿರು ತ್ತೇವೆ. ಹೆಚ್ಚಿನ ಮಟ್ಟಿಗೆ ನಮ್ಮ ಇಂದಿನ ಶಿಕ್ಷಣಕ್ರಮವು ಇಷ್ಟನ್ನು ಮಾತ್ರವೇ ಕುರಿತದ್ದಾಗಿರುತ್ತದೆ. ಆದರೆ ಈ ವ್ಯವಹಾರಜ್ಞಾನದ ಸರಿಯಾದ ಸಂಪಾದನೆಗೆಂದು ಬಾಲ್ಯದ ಎಲ್ಲ ಭಾಗವನ್ನೂ, ತಾರುಣ್ಯದ ಬಹುಭಾಗವನ್ನೂ ಮೀಸಲಿಟ್ಟು ನಂತರ ನಾವೊಮ್ಮೆ ಹಿಂತಿರುಗಿ ನೋಡಿದಾಗ ಇದು ನಮ್ಮ ಜೀವನವನ್ನು ಸುಂದರವಾಗಿ ಸುವ, ಸೌಖ್ಯವಾಗಿಸುವ, ನೆಮ್ಮದಿ, ಶಾಂತಿಯನ್ನು ನೀಡುವ ಪರಿಪೂರ್ಣವಿದ್ಯೆ ಯಲ್ಲ ಎಂಬ ಅರಿವು ಕೆಲವರಿಗಾದರೂ ಆಗುವುದುಂಟು. ನಿಜವಾಗಿಯೂ ನಮ್ಮೆಲ್ಲರ ಆಶಯವೂ ಈ ನೆಮ್ಮದಿ, ಶಾಂತಿಗಳನ್ನು ಹೊಂದುವುದೇ ಆಗಿದ್ದು ಅದಕ್ಕಾಗಿ ಅನೇಕಾನೇಕ ಪ್ರಯತ್ನಗಳನ್ನು ಮಾಡುತ್ತಾ, ಅಂತರಂಗದಲ್ಲಿರುವ ಶಾಂತಿಯನ್ನು ಹೊರಗಿನ ವಿಷಯಗಳಲ್ಲಿ ಅರುಸುತ್ತಾ, ಅದು ದೊರಕಲಿಲ್ಲವಲ್ಲ ಎಂದು ನಿಟ್ಟುಸಿರುಬಿಡುತ್ತಿರುತ್ತೇವೆ. ಅಷ್ಟೇ ಅಲ್ಲದೆ ಹೀಗೆ ಇದುವರೆವಿಗೂ ಮಾಡಿದ ಎಲ್ಲ ಪ್ರಯತ್ನಗಳು ವ್ಯರ್ಥವಾದವೆಂದೂ, ಇನ್ನು ಹೊಸದಾಗಿ ಪ್ರಯತ್ನಿಸಲು ಸಾಧ್ಯವಾಗದಂತೆ ಮುಪ್ಪೂ, ಮೃತ್ಯುವೂ ನಮ್ಮ ಆವರಿಸಿಬಿಡುತ್ತದೆಂದೂ ಭಯವಿಹ್ವಲರಾಗಿ ಚಿಂತಾಕ್ರಾಂತರಾಗಿರುತ್ತೇವೆ. ಈ ರೀತಿಯಾಗಿ ದಾರಿಕಾಣದೆ ಕಂಗೆಟ್ಟಿರುವ ಜೀವರುಗಳಿಗೆ ಈ ಪ್ರಪಂಚದ ಬಗೆಗಿನ ತಪ್ಪುತಿಳಿವಳಿಕೆಯೇ ಇದಕ್ಕೆ ಕಾರಣ ವೆಂದೂ, ಅದನ್ನು ಹೋಗಲಾಡಿಸಲು ವೇದಾಂತವಿದ್ಯೆ ಅಥವಾ ಆತ್ಮವಿದ್ಯೆ ಯೆಂಬ ಪರಮಾರ್ಥವಿಚಾರವನ್ನು ತಿಳಿದುಕೊಳ್ಳಬೇಕೆಂದೂ, ಅದರಿಂದಲೇ ಆತ್ಯಂತಿಕವಾದ ನೆಮ್ಮದಿ, ಶಾಂತಿ, ಸೌಖ್ಯವು ನಮ್ಮಲ್ಲಿ ನೆಲೆಮಾಡಿಕೊಳ್ಳುವ ವೆಂದೂ ಉಪನಿಷತ್ತುಗಳಲ್ಲಿ ಹೇಳಿದೆ. ಈ ಪರಮಾರ್ಥವಿಚಾರವೊಂದನ್ನು ಅರಿತುಕೊಂಡರೆ ನಮ್ಮ ನಿಜವಾದ ಸ್ವರೂಪವೂ, ಇಡಿಯ ಪ್ರಪಂಚದ ನಿಜವಾದ ತಿರುಳೂ ಗೊತ್ತಾಗುತ್ತದೆಂದೂ, ಅದನ್ನರಿತನಂತರ ಶೋಕಮೋಹಗಳು ಅಳಿಸಿಹೋಗಿ ನಿತ್ಯಶಾಂತಿಯು ನಮ್ಮಲ್ಲಿ ನೆಲಸುವುದೆಂದು ಶ್ರುತಿಗಳು ಅಭಯವನ್ನು ನೀಡಿವೆ. ಆದ್ದರಿಂದಲೇ `ಏತಜ್ಜ್ಞೇಯಂ ನಿತ್ಯಮೇವಾತ್ಮಸಂಸ್ಥಂ ನಾತಃಪರಂ ವೇದಿತವ್ಯಂ ಹಿ ಕಿಂಚಿತ್' - `ನಿತ್ಯವೂ, ನಮ್ಮ ಹೃದಯದಲ್ಲಿಯೇ ಇದ್ದುಕೊಂಡಿರುವ ಈ ಆತ್ಮನನ್ನೇ ತಿಳಿದುಕೊಳ್ಳಬೇಕು. ಇದನ್ನು ತಿಳಿದನಂತರ ಮತ್ತೇನನ್ನೂ ತಿಳಿಯಬೇಕಾದದ್ದು ಉಳಿದಿರುವುದಿಲ್ಲ' ಎಂದು ಉಪನಿಷತ್ತಿನಲ್ಲಿ ಹೇಳಿದೆ. ನಮ್ಮ ಹೃದಯದಲ್ಲಿರುವ ಆತ್ಮನನ್ನು ತಿಳಿದುಕೊಂಡರೆ ಮತ್ತೇನನ್ನೂ ತಿಳಿಯಬೇಕಾದದ್ದು ಇಲ್ಲ ಎಂಬುದು ಹೇಗೆ ? ಎಂಬ ಸಂದೇಹಕ್ಕೆ ಉತ್ತರವಾಗಿ ಒಂದು ಸುಂದರವಾದ ದೃಷ್ಟಾಂತವನ್ನು ಛಾಂದೋಗ್ಯೋಪನಿಷತ್ತಿನಲ್ಲಿ ನೀಡಿರುತ್ತದೆ. ಶ್ವೇತಕೇತವು ನಮ್ಮಗಳಂತೆಯೇ ವಿಶ್ವವಿದ್ಯಾನಿಲಯವೊಂದರಲ್ಲಿ ಅಧ್ಯಯನವನ್ನು ಮಾಡಿಕೊಂಡು ತಂದೆಯ ಬಳಿಗೆ ಹೆಮ್ಮೆಯಿಂದ ಬಂದಾಗ ತಂದೆಯು ಅವನನ್ನು ಕುರಿತು `ಅಪ್ಪಾ, ಯಾವ ಒಂದನ್ನು ತಿಳಿದುಕೊಂಡರೆ ಎಲ್ಲವನ್ನೂ ತಿಳಿದುಕೊಂಡಂತೆ ಆಗುವುದೋ ಅದನ್ನು ನೀನು ಅರಿತಿರುವೆಯಾ ?' ಎಂದು ಕೇಳುತ್ತಾನೆ. ಆಶ್ಚರ್ಯಚಕಿತನಾದ ಶ್ವೇತಕೇತುವು ತನ್ನ ಅಹಂಕಾರವನ್ನು ಬಿಟ್ಟು ಕೂಡಲೇ ಅಂತಹ ವಿದ್ಯೆಯು ತಿಳಿಯದೆಂದೂ ಕೃಪೆಯಿಟ್ಟು ತಿಳಿಸಬೇಕೆಂದೂ ಕೇಳಿಕೊಳ್ಳುತ್ತಾನೆ. ಆಗ ಅವನ ತಂದೆಯು `ಯಥಾ ಸೋಮ್ಯ ಏಕೇನ ಮೃತ್ಪಿಂಡೇನ ಸರ್ವಂ ಮೃನ್ಮಯಂ ವಿಜ್ಞಾತಂ ಸ್ಯಾತ್ ವಾಚಾರಂಭಣಂ ವಿಕಾರೋ ನಾಮಧೇಯಂ ಮೃತ್ತಿಕೇತ್ಯೇವ ಸತ್ಯಮ್ - ಹೇಗೆ ಒಂದು ಮಣ್ಣಿನ ಹೆಂಟೆಯನ್ನು ಇದು ಮಣ್ಣು ಎಂದು ತಿಳಿಯುವುದರಿಂದ ಆ ಮಣ್ಣಿನಿಂದ ಮಾಡಿದ ಮಡಕೆ, ಕುಡಿಕೆಗಳೆಲ್ಲವೂ ನಾಮ, ರೂಪಗಳಿಂದ ಭಿನ್ನಭಿನ್ನವಾಗಿವೆಯೇ ಹೊರತು ಅವು ಮಣ್ಣೇ ಎಂದು ತಿಳಿಯುತ್ತದೆಯೋ - ಅಂತೆಯೇ ಆತ್ಮನಿಂದ ಉಂಟಾಗಿರುವ ಈ ಪ್ರಪಂಚವು ನಾಮ, ರೂಪಗಳೆಂಬ ಉಪಾಧಿಯಿಂದ (ಅಡ್ಡಿಯಿಂದ) ವಿಧವಿಧವಾಗಿ ಕಾಣುತ್ತಿದ್ದರೂ ಇದರ ನಿಜವಾದ ಸ್ವರೂಪವು ಆತ್ಮನೇ ಆಗಿದೆ. ಆದ್ದರಿಂದ ಆತ್ಮನನ್ನು ತಿಳಿದುಕೊಂಡರೆ ಅದರಿಂದ ಉಂಟಾದ ಪ್ರಪಂಚದ ತಿರುಳಿನ ಅರಿವೂ ಆಗುವುದು' ಎನ್ನುತ್ತಾನೆ. ಮಾಂಡೂಕ್ಯೋಪನಿಷತ್ತಿನಲ್ಲಿ ಸಾರ್ವತ್ರಿಕ ಪೂರ್ಣಾನುಭವವೆನಿಸಿ ಕೊಂಡಿರುವ ಅವಸ್ಥಾತ್ರಯವೆಂಬ ಪ್ರಕ್ರಿಯೆಯನ್ನು ಹೇಳುತ್ತಾ `ಈ ಪ್ರಪಂಚವು ಈಗ ನಾವು ತಿಳಿದಿರುವಂತೆ ನಮಗಿಂತ ಅಗಾಧವಾಗಿ ಇಲ್ಲದೆ ನಮ್ಮ ಇಂದ್ರಿಯ ಗಳಿಗೆ ವಿಷಯವಾಗಿರುವಷ್ಟು ಅಲ್ಪದ್ದಾಗಿದೆ. ದೇಶಕಾಲಗಳೆಂಬ ಅಳತೆಗೋಲು ಗಳಿಂದ ಇಡಿಯ ಪ್ರಪಂಚವು ಉಂಟಾಗಿರುತ್ತದೆ. ಈ ದೇಶಕಾಲಗಳೋ ನಮಗೆ ಉಂಟಾಗುವ ಎಚ್ಚರ, ಕನಸು, ಸುಷುಪ್ತಿಗಳಿಗೆ ಕಟ್ಟುಬಿದ್ದಿರುತ್ತವೆ. ಆದ್ದರಿಂದಲೇ ಕನಸಿನ ಪ್ರಪಂಚವು ಎಚ್ಚರದ ಪ್ರಪಂಚಕ್ಕಿಂತಲೂ ದೇಶಕಾಲಗಳಲ್ಲಿ ಅತ್ಯಂತ ಭಿನ್ನವಾಗಿರುತ್ತವೆ' ಎಂದು ತಿಳಿಸಿರುತ್ತದೆ. ಆದ್ದರಿಂದಲೇ ಎಚ್ಚರದಲ್ಲಿ ಸಾವಿರಾರು ಮೈಲು ದೂರವಿರುವ ಸ್ಥಳ ಗಳನ್ನು ಕನಸಿನಲ್ಲಿ ಕ್ಷಣಾರ್ಧದಲ್ಲಿ ತಲುಪಿದಂತೆಯೂ, ಒಂದೊಮ್ಮೆ ಹಠಾತ್ತಾಗಿ ಬಾಲ್ಯ, ತಾರುಣ್ಯ, ವೃದ್ಧಾಪ್ಯಗಳು ಆವರಿಸಿಕೊಂಡು ನಾವು ಹುಟ್ಟಿ ಮೃತಿ ಹೊಂದುವಂತೆಯೂ ಅನುಭವವಾಗುತ್ತದೆ. ಇನ್ನು ಸುಷುಪ್ತಿ ಅಥವಾ ನಿದ್ರೆಯಲ್ಲಿ ಯಾವ ಲೋಕದ, ವ್ಯವಹಾರದ, ಚರಾಚರವಸ್ತುಗಳ ದರ್ಶನ, ಸ್ಪರ್ಶಗಳ ಅನುಭವವೂ ಇಲ್ಲದೆ ನಾನೊಬ್ಬನೇ ನಿದ್ರೆ ಮಾಡಿದೆನು ಎಂಬಂತಹ ಅನುಭವವಾಗುವುದು. ಇವೆಲ್ಲವನ್ನೂ ಗುರುಶಾಸ್ತ್ರಗಳ ಸಹಾಯದಿಂದ ಸರಿಯಾಗಿ ತುಲನೆಮಾಡಿ ನೋಡಿಕೊಂಡರೆ ಅವಸ್ಥೆಗಳ ಅಡಿಯಾಳಾಗಿರುವ ಈ ಪ್ರಪಂಚದ ತಿರುಳೂ, ಈ ಎಲ್ಲ ಅವಸ್ಥೆಗಳೂ ನಮಗೇ ಉಂಟಾದಂತೆ ಅನುಭವವನ್ನು ನೀಡುತ್ತಿರುವ ಸಾಕ್ಷಿಸ್ವರೂಪಿಯಾದ ಆತ್ಮನ eನವೂ ಸರಿಯಾಗಿ ಆಗುತ್ತದೆ ಎಂದು ವೇದಾಂತದಲ್ಲಿ ಹೇಳಿರುತ್ತದೆ. ಆದ್ದರಿಂದಲೇ `ಆತ್ಮಾ ವಾ ಅರೇ ದ್ರಷ್ಟವ್ಯಃ ಶ್ರೋತವ್ಯಃ ಮಂತವ್ಯಃ ನಿದಿಧ್ಯಾಸಿತವ್ಯಃ ಚ' - `ಆತ್ಮನೊಬ್ಬನನ್ನೇ ನೋಡಬೇಕು, ಕೇಳಬೇಕು, ಚಿಂತಿಸಬೇಕು, ತಿಳಿದುಕೊಳ್ಳಬೇಕು' ಎಂದೂ, ಇಡಿಯ ಜಗತ್ತಿನ ತಿರುಳಾದ ಆತ್ಮನನ್ನು ತಿಳಿದುಕೊಂಡರೆ ತಿಳಿಯಬೇಕಾದದ್ದು ಇನ್ನೇನೂ ಉಳಿದಿರುವುದಿಲ್ಲ ವಾದ್ದರಿಂದ ಎಲ್ಲರೂ ಈ ಒಂದನ್ನೇ ತಿಳಿಯಬೇಕು ಎಂದು ಉಪನಿಷತ್ತು ಗಳಲ್ಲಿ ಜಿeಸುಗಳ ಮನಮುಟ್ಟುವಂತೆ ಹೇಳಿರುತ್ತದೆ. - ದಿಲೀಪ್ ಬೆಳ್ಳಾವೆ. (Published in Adhyatma Prakasha) |