ಪರಮಾರ್ಥಸತ್ಯ

ಉಪನಿಷತ್ತುಗಳಲ್ಲಿ ತಿಳಿಸಿರುವ ಜೀವ, ಜಗತ್ತು, ಈಶ್ವರವಿಚಾರಕ್ಕೆ ಪರಮಾರ್ಥಸತ್ಯ ಎಂದು ಹೆಸರು. ಪರಮಾರ್ಥವೆಂದರೆ (ಪರಮ ಅರ್ಥ) ಅತ್ಯಂತ ಕಟ್ಟಕಡೆಯ, ಶ್ರೇಷ್ಠವಾದ ಅರ್ಥ. ಅನುಭಾವಿಗಳಾದ ಋಷಿಗಳು ತಾವು ಕಂಡುಕೊಂಡ ಮತ್ತು ಎಂದೂ ಬದಲಾಗದಿರುವ ಜೀವ, ಜಗತ್ತು, ಈಶ್ವರಸ್ವರೂಪಗಳನ್ನು ಉಪನಿಷತ್ತುಗಳಲ್ಲಿ ತಿಳಿಸಿದ್ದಾರೆ.

ಇದರಂತೆ “ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ” - “ಜೀವನಿಗೂ ಈಶ್ವರನಿಗೂ ಯಾವುದೇ ಭೇದವಿಲ್ಲ. ಜಗತ್ತು ಈಗ ನಾವು ಕಾಣುತ್ತಿರುವ ರೂಪದಿಂದ ಇರುವುದೂ ಇಲ್ಲ, ಅದು ಯಾವುದೇ ಬದಲಾವಣೆಗಳಿಲ್ಲದ ಯಾವಾಗಲೂ ಇದ್ದುಕೊಂಡಿರುವ ಬ್ರಹ್ಮಸ್ವರೂಪವೇ ಆಗಿದೆ” ಎಂದು ವೇದಾಂತಗಳಲ್ಲಿ ಎಂದರೆ ಉಪನಿಷತ್ತುಗಳಲ್ಲಿ ಹೇಳಿದೆ.

ಆದರೆ ಇದೇನು ? ಜಗತ್ತು ನಾವು ಕಾಣುತ್ತಿರುವಂತೆ ವಿಶಾಲವಾಗಿ, ಅಗಾಧವಾಗಿ ಹರಡಿಕೊಂಡಿದ್ದು ಅನಾದಿಕಾಲದಿಂದಲೂ ಇದ್ದುಕೊಂಡಿದ್ದರೂ ಆಗಾಗ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಂತೆ ತೋರುವುದಲ್ಲ ? ಹಾಗಾದರೆ ಉಪನಿಷತ್ತುಗಳಲ್ಲಿ ಹೇಳಿರುವ ವಿಚಾರಕ್ಕೇನು ಗತಿ ? ಕಣ್ಣಿಗೆ ಕಂಡದ್ದನ್ನು ತಪ್ಪೆಂದೂ, ಕಾಣದ್ದನ್ನು ಸತ್ಯವೆಂದೂ ತಿಳಿಯುವುದು ಹೇಗೆ ? ಎಂಬ ಪ್ರಶ್ನೆಗೆ ಉತ್ತರವನ್ನು ಉಪನಿಷತ್ತುಗಳಲ್ಲಿ ಅನೇಕ ದೃಷ್ಟಾಂತಗಳೊಂದಿಗೆ ಮೂರು ಬಗೆಯ `ಸತ್ಯ’ಗಳನ್ನು ತಿಳಿಸುವುದರ ಮೂಲಕವಾಗಿ ಕೊಟ್ಟಿರುತ್ತದೆ.

ಮೊದಲಿನ ಸತ್ಯವು `ಪ್ರಾತಿಭಾಸಿಕ ಸತ್ಯ’ - ಎಂದರೆ ಇಂದ್ರಿಯದೋಷದಿಂದ ಒಂದು ವಸ್ತುವಿನ ಸ್ವರೂಪವು ಸತ್ಯವಾಗಿರುವಂತೆ ಕ್ಷಣಕಾಲ ಭಾಸವಾಗುವುದು. ಈ ಪ್ರಾತಿಭಾಸಿಕ ಸತ್ಯಕ್ಕೆ ವೇದಾಂತದಲ್ಲಿ (ರಜ್ಜುಸರ್ಪ) ಹಗ್ಗವು ಹಾವಾಗಿ ತೋರಿಬರುವುದು, (ಶುಕ್ತಿರಜತ) ಕಪ್ಪೆಯ ಚಿಪ್ಪು ಬೆಳ್ಳಿಯಂತೆ ಭಾಸವಾಗುವುದು, ಕಣ್ಣಿನ ದೋಷವಿದ್ದವನಿಗೆ ಆಕಾಶದಲ್ಲಿ ಇಬ್ಬರು ಚಂದ್ರರು ಇರುವಂತೆ ಕಾಣುವ ಉದಾಹರಣೆಗಳನ್ನು ನೀಡಿದೆ. ನಮ್ಮ ಕಣ್ಣಿಗೆ ಕಾಣುವ ರೂಪಕ್ಕಿಂತಲೂ ವಸ್ತುಸ್ವರೂಪವು ಬೇರೆಯೇ ಇರುವುದು ನಮ್ಮ ನಿತ್ಯದ ಅನುಭವದಲ್ಲಿಯೂ ಇದೆ. ಮರುಭೂಮಿಯಲ್ಲಿ ಬಳಲಿ ಬಾಯಾರಿದ ವ್ಯಕ್ತಿಯೋರ್ವನಿಗೆ ತೋರಿಕೊಳ್ಳುವ ‘ಮರೀಚಿಕೆ’ಯ ಅಸ್ತಿತ್ವವು ‘ಪ್ರಾತಿಭಾಸಿಕ ಸತ್ಯ’. ಇದು ಮರೀಚಿಕೆಯೆಂದು ಹತ್ತಿರದಿಂದ ಕಂಡುಕೊಳ್ಳುವವರೆಗೂ ‘ಸತ್ಯ’ವೆಂದು ‘ಭಾಸ’ವಾಗುತ್ತಿತ್ತಲ್ಲವೆ ? ಇದು ಕ್ಷಣಕಾಲ ಮಾತ್ರ ಭಾಸವಾಗಿ ನಂತರ ಮಿಥ್ಯೆಯೆನಿಸುವುದರಿಂದ ಈ `ಸತ್ಯ’ವನ್ನು ಅರಿಯುವುದು ಎಲ್ಲರಿಗೂ ಅತ್ಯಂತ ಸುಲಭವಾಗಿದೆ.

ಇನ್ನು ಎರಡನೆಯ ಸತ್ಯವು ‘ವ್ಯಾವಹಾರಿಕ ಸತ್ಯ’ - ಎಂದರೆ ವಸ್ತುವಿನ ನಿಜಸ್ವರೂಪವು ಯಾವಾಗಲೂ ಕಂಡುಬರುವುದಕ್ಕಿಂತ ಭಿನ್ನವಾಗಿಯೇ ಇದ್ದರೂ, ಕಣ್ಣಿಗೆ ಕಂಡುಬರುವ, ಮನಸ್ಸಿಗೆ ಸರಿಯೆಂದು ತೋರುವ ವಸ್ತುಸ್ವರೂಪವನ್ನೇ `ಸತ್ಯ’ವೆಂದು ಭಾವಿಸುವುದು. ಅದರಂತೆ ನಾವು ವ್ಯವಹಾರದಲ್ಲಿ ಕಾಣುತ್ತಿರುವ ಜಗತ್ತು, ಜೀವರುಗಳ ಸ್ವರೂಪಾವಸ್ಥೆಯನ್ನು ಉಪನಿಷತ್ತುಗಳಲ್ಲಿ ‘ವ್ಯಾವಹಾರಿಕ ಸತ್ಯ’ ಎಂದು ನಿರ್ದೇಶಿಸಿದೆ. ``ವಿಶಾಲವಾದ ಈ ಜಗತ್ತು ಎಂದಿನಿಂದಲೋ ಇದ್ದುಕೊಂಡಿದೆ. ಇದರಲ್ಲಿ ಕೋಟ್ಯನುಕೋಟಿ ಜೀವರುಗಳು ಜನನಮರಣಚಕ್ರಕ್ಕೆ ಸಿಲುಕಿ ಜನ್ಮಗಳನ್ನು ಹೊಂದುತ್ತಿದ್ದಾರೆ’ಎಂದು ನಾವು ತಿಳಿದಿದ್ದೇವಲ್ಲವೆ ? ಆದರೆ ಉಪನಿಷತ್ತುಗಳಲ್ಲಿ ``ಈಗ ನಾವು ಕಾಣುತ್ತಿರುವ ಜೀವ, ಜಗತ್ತಿನ ರೂಪವು ಎಚ್ಚರವೆಂಬ ಒಂದು ಅವಸ್ಥೆಯಲ್ಲಿನ ದೇಶ, ಕಾಲಗಳಿಗೆ ಕಟ್ಟುಬಿದ್ದಿದ್ದು ಆ ಅವಸ್ಥೆಯಲ್ಲಿ ಮಾತ್ರವೇ ಕಂಡುಬರುತ್ತಿರುತ್ತದೆ. ಕನಸು, ನಿದ್ರೆ (ಸುಷುಪ್ತಿ) ಎಂಬ ಇನ್ನೆರಡು ಅವಸ್ಥೆಗಳಲ್ಲಿ ಅದು ಸಂಪೂರ್ಣವಾಗಿ ಭಿನ್ನವಾಗಿಯೂ, ಅಸ್ತಿತ್ವವೇ ಇಲ್ಲದಾಗಿಯೂ ಇರುತ್ತದೆ’ಎಂದು ಅವಸ್ಥಾತ್ರಯ ಎಂಬ ವಿಶಿಷ್ಟಪ್ರಕ್ರಿಯೆಯೊಂದಿಗೆ ಹೇಳಿದೆ. ಲೋಕದಲ್ಲಿಯೂ ಭೂಮಿಯು ಅಚಲವಾಗಿಯೂ, ಅದರ ಮೇಲ್ಮೈ ಚಪ್ಪಟೆಯಾಗಿಯೂ ಇದೆಯೆಂದು ಕಣ್ಣಿಗೆ ತೋರಿದರೂ, ಅದು ಗೋಲಾಕಾರವಾಗಿ ಇದೆಯೆಂದೂ ಸೂರ್ಯನ ಸುತ್ತಲೂ ಸದಾ ಸುತ್ತುತ್ತಿರುವುದೆಂದೂ ನಮ್ಮ ಕಣ್ಣಿಗೆ ಕಾಣದ ತತ್ವವನ್ನು ಖಗೋಳವಿeನವು ತಿಳಿಸಿಕೊಡುತ್ತದಲ್ಲವೆ ? ಇದರಂತೆಯೇ ಎಲ್ಲ ವ್ಯವಹಾರಗಳಿಗೂ ಮೂಲಾಧಾರವಾಗಿದ್ದರೂ ಎಚ್ಚರದಲ್ಲಿ ಮಾತ್ರವೇ ತೋರಿಬರುವ ಈ ಜೀವ, ಜಗತ್ತುಗಳ ಇರುವಿಕೆಯನ್ನು ‘ವ್ಯಾವಹಾರಿಕ ಸತ್ಯ’ ಎಂದು ವೇದಾಂತದಲ್ಲಿ ಕರೆದಿದೆ.

ಹೀಗೆ ಎಲ್ಲರ ಅನುಭವದಲ್ಲಿರುವ ಎಚ್ಚರ, ಕನಸು, ಸುಷುಪ್ತಿ ಎಂಬ ಮೂರೂ ಅವಸ್ಥೆಗಳಲ್ಲಿ ಜೀವ, ಜಗತ್ತುಗಳು ಒಂದೇರೀತಿಯಾಗಿ ತೋರಿಬರುವುದಿಲ್ಲವಾದ್ದರಿಂದ ಅವುಗಳಿಗೆ ನಿತ್ಯತ್ವವೂ, ನಿರ್ವಿಕಾರತ್ವವೂ ಇರುವುದಿಲ್ಲವೆಂದು ಯಾರು ಚೆನ್ನಾಗಿ ತಿಳಿದುಕೊಂಡು, ಆದರೂ ಈ ಎಲ್ಲ ಅರಿವು, ಅನುಭವಗಳನ್ನೂ ತಾನೇ ಹೊಂದುತ್ತಿರುವಂತೆ ತೋರುವುದು ಏಕೆಂದು ಅತ್ಯಂತ ಶ್ರದ್ಧೆಯಿಂದ ಪ್ರಶ್ನಿಸುತ್ತಾನೆಯೋ ಅಂತಹ ಜಿeಸುವಿಗೆ ವೇದಾಂತದಲ್ಲಿ ಮೂರನೆಯದಾದ ‘ಪರಮಾರ್ಥಸತ್ಯ’ವನ್ನು ಹೇಳಲಾಗಿದೆ. ಹುಟ್ಟುಸಾವುಗಳೂ, ಬಾಲ್ಯಾದ್ಯವಸ್ಥೆಗಳೂ ಇರುವ ಶರೀರವು ನಾನಲ್ಲವೆಂದೂ, ಅವುಗಳಲ್ಲಿ ಸದಾ ಚೈತನ್ಯಸ್ವರೂಪದಿಂದ ಇರುತ್ತಾ, ಶುದ್ಧ, ಬುದ್ಧ, ಮುಕ್ತಸ್ವಭಾವದವನಾಗಿ, ‘ಬ್ರಹ್ಮ’ವೆಂಬ ನಿರ್ಗುಣ, ನಿರ್ವಿಕಾರ ಪದಾರ್ಥರೂಪದಿಂದ ಜಗತ್ತೆಲ್ಲವನ್ನೂ ತನ್ನಲ್ಲಿ ಅಡಗಿಸಿಕೊಂಡಿರುವ ‘ಆತ್ಮ’ ನೇ ನಾನು ಎಂಬ ‘ಪರಮಾರ್ಥಸತ್ಯ’ವು ಆ ಜಿeಸುವಿಗೆ ದೃಗ್ಗೋಚರವಾಗುತ್ತದೆ.

- ದಿಲೀಪ್ ಬೆಳ್ಳಾವೆ

(Published in Adhyatma Prakasha)


Personalities | Institutions | Articles | Knowledge Store | Cultural Quiz | About Us | Contact Us | Help Us | Home