CulturalIndia - Spirituality - Taittireeya Brahmana

 

 

ಬ್ರಾಹ್ಮಣ - ಪರಿಚಯ

 

`ಮಂತ್ರಬ್ರಾಹ್ಮಣಯೋಃ ವೇದನಾಮಧೇಯಂ' (ಆಪ. ಶ್ರೌ. ಸೂ. ೨೪-೧-೩೧) ಎಂದು ವೇದದ ಲಕ್ಷಣವನ್ನು ನಿರೂಪಿಸಿದ್ದಾರೆ. ಯಾಜ್ಞಿಕರು ಯಾವುದನ್ನು ಮಂತ್ರ ಎಂದು ವ್ಯವಹರಿಸುವರೋ ಅದು ಮಂತ್ರ. `ಮನನಾತ್ ಮಂತ್ರಃ' ಎಂದೂ ಹೇಳುವುದುಂಟು. `ವಿಧಾಯಕಂ ವಾಕ್ಯಂ ಬ್ರಾಹ್ಮಣಂ' ಎಂದು ಬ್ರಾಹ್ಮಣದ ಲಕ್ಷಣ ಹೇಳುತ್ತಾರೆ. `ಶೇಷೇ ಬ್ರಾಹ್ಮಣಶಬ್ದಃ' (ಜೈ. ಸೂ. ೨-೧-೩೩) ಎಂದು ಹೇಳಿ ಜೈಮಿನಿಗಳು ಮಂತ್ರವಲ್ಲದುದು ಬ್ರಾಹ್ಮಣ ಎಂದು ಹೇಳುತ್ತಾರೆ. ಸಾಯಣರು `ಮಂತ್ರವ್ಯತಿರಿಕ್ತಭಾಗೇ ತು ಬ್ರಾಹ್ಮಣಶಬ್ದಃ ತೈಃ ವ್ಯವಹೃತಃ' ಎಂದು ಹೇಳುತ್ತಾರೆ. `ಮಂತ್ರ' ಹಾಗೂ `ಬ್ರಾಹ್ಮಣ' ಎಂಬ ಶಬ್ದಗಳ ಪ್ರಯೋಗ ವೇದದಲ್ಲಿಯೇ ಕಂಡುಬರುತ್ತದೆ. ಬ್ರಾಹ್ಮಣಗ್ರಂಥಗಳು ವೇದಮಂತ್ರಗಳ ವಿವರಣೆಯನ್ನು ಕೊಡುವುದರ ಜೊತೆಗೆ ಯಾಗಗಳ ವೈಜ್ಞಾನಿಕ, ಆದಿsಭೌತಿಕ ಮತ್ತು ಆಧ್ಯಾತ್ಮಿಕ ಮೀಮಾಂಸೆಯನ್ನು ಬೆಳೆಸುತ್ತವೆ. ಯಜ್ಞವೂ ವಿಶಿಷ್ಟವಾದ ವಿಜ್ಞಾನ. ಅದರ ಧಾರ್ಮಿಕ ಮೌಲ್ಯ ಅಲ್ಪವಾದುದಲ್ಲ. ಯಜ್ಞದ ಉಚಿತವಾದ ಅನುಷ್ಠಾನದಿಂದ ಹಾಗೂ ಅನ್ಯೂನಾತಿರಿಕ್ತವಾದ ನಿರ್ವಾಹದಿಂದ ಸಮಗ್ರವಾದ ಫಲಪ್ರಾಪ್ತಿ. ಯಜ್ಞದ ಸಮಗ್ರ ಪರಿಚಯ ಬ್ರಾಹ್ಮಣ ಗ್ರಂಥಗಳಿಂದಾಗುತ್ತದೆ.

ಬ್ರಾಹ್ಮಣಗ್ರಂಥಗಳು ಗದ್ಯರೂಪದಲ್ಲಿವೆ. ಇವುಗಳಲ್ಲಿ ಅನೇಕ ಪ್ರಾಚೀನ ಮತ್ತು ಅರ್ವಾಚೀನ ಆಖ್ಯಾನಗಳಿವೆ. ಯಾಗಗಳಲ್ಲಿ ಮಂತ್ರಗಳ ವಿನಿಯೋಗವನ್ನು ಇವು ತಿಳಿಸುತ್ತವೆ. ಮೀಮಾಂಸಕರ ಅಬಿsಪ್ರಾಯದಂತೆ ವೇದದಲ್ಲಿ ವಿದಿsವಾಕ್ಯಗಳಿಗೇ ಪ್ರಾಧಾನ್ಯ. ಅಲ್ಲಿ ಉಪಲಬ್ಧವಾಗುವ ಇತರ ಎಲ್ಲ ವಿಚಾರಗಳೂ ಆ ವಿದಿsವಾಕ್ಯಗಳನ್ನು ಪೋಷಿಸುತ್ತವೆ. ಇವುಗಳನ್ನು ಅವರು `ಅರ್ಥವಾದ' ಎನ್ನುತ್ತಾರೆ. ಅರ್ಥವಾದಗಳಲ್ಲಿ ಯಾಗಪ್ರಯುಕ್ತವಾದ ವಸ್ತುಗಳ ಪ್ರಶಂಸೆ, ಯಾಗನಿಷಿದ್ಧವಾದ ವಸ್ತುಗಳ ನಿಂದೆಯೂ ಬರುತ್ತವೆ. ವಿದಿsವಿಧಾನಕ್ಕೆ ತರ್ಕದ ಆಧಾರವಿದೆ. ಆದುದರಿಂದ ಬ್ರಾಹ್ಮಣ ಗ್ರಂಥಗಳು `ಹೇತು' ಅಥವಾ ಕಾರಣ ನಿರ್ದೇಶ ಮಾಡುತ್ತವೆ. ಅನುಷ್ಠಾನಾಂಶಗಳನ್ನು ಪುಷ್ಟೀಕರಿಸಲು ಸೂಕ್ತವಾದ ಪ್ರಾಚೀನೇತಿ ಹಾಸಗಳೂ ಆಖ್ಯಾನಗಳೂ ಬರುತ್ತವೆ. ಇವುಗಳಿಂದ ಯಾಜ್ಞಿಕವಾದ ಶ್ರದ್ಧೆ ದೃಢವಾಗುತ್ತದೆ. ವಿದಿsವಾಕ್ಯಗಳನ್ನು ವಿವರಿಸುವ ಸಂದರ್ಭದಲ್ಲಿ `ನಿರ್ವಚನ'ದ ಉಗಮವೂ ಆಗುತ್ತದೆ. ಪ್ರತಿಯೊಂದು ವೇದಕ್ಕೂ ಸಂಬಂದಿsಸಿದ ಬ್ರಾಹ್ಮಣಗ್ರಂಥಗಳಿವೆ. ಕೃಷ್ಣಯಜುರ್ವೇದಕ್ಕೆ ಸೇರಿದ ಬ್ರಾಹ್ಮಣಗಳಲ್ಲಿ ತೈತ್ತಿರೀಯ ಬ್ರಾಹ್ಮಣ ಒಂದೇ ಉಪಲಬ್ಧವಾಗಿರುವುದು. ಸಂಹಿತಾಭಾಗದಲ್ಲಿ ಸೇರಿರುವ ಬ್ರಾಹ್ಮಣದ ಮುಂದುವರಿದ ಭಾಗವಾಗಿದೆ ಈ ಬ್ರಾಹ್ಮಣ. ಈ ಬ್ರಾಹ್ಮಣದಲ್ಲಿ ಮೂರು ಕಾಂಡಗಳಿವೆ. ಒಂದೊಂದು ಕಾಂಡದಲ್ಲಿಯೂ ಅನೇಕ ಪ್ರಪಾಠಕಗಳೂ ಪ್ರಪಾಠಕಗಳಲ್ಲಿ ಅನೇಕ ಅನುವಾಕಗಳೂ ಇವೆ. ಒಂದೊಂದು ಅನುವಾಕದಲ್ಲಿಯೂ ಹಲವಾರು ವಾಕ್ಯಗಳಿವೆ. ಪ್ರಪಾಠಕಗಳ ಕೊನೆಯಲ್ಲಿ ವಾಕ್ಯಗಳನ್ನು ಎಣಿಸಿ ಕೊಡಲಾಗಿದೆ. ಮೊದಲನೆಯ ಮತ್ತು ಎರಡನೆಯ ಕಾಂಡದಲ್ಲಿ ಎಂಟೆಂಟು ಪ್ರಪಾಠಕಗಳೂ ಮೂರನೆಯ ಕಾಂಡದಲ್ಲಿ ಹನ್ನೆರಡು ಪ್ರಪಾಠಕಗಳೂ ಇವೆ. ಮೂರು ಕಾಂಡಗಳ ಒಟ್ಟು ೨೮ ಪ್ರಪಾಠಕಗಳಲ್ಲಿ ೧೭,೪೮೦ ವಾಕ್ಯಗಳಿವೆ ಎಂದು ಕೊಡಲಾಗಿದೆ.

ಮೊದಲನೆಯ ಕಾಂಡದಲ್ಲಿ ಅಗ್ನ್ಯಾಧಾನ, ಗವಾಮಯನ ವಾಜಪೇಯ, ಸೋಮ ಮತ್ತು ರಾಜಸೂಯಗಳ ವರ್ಣನೆ ಇದೆ. ಅಗ್ನ್ಯಾಧಾನಕ್ಕೆ ನಿರ್ದೋಷವಾದ ನಕ್ಷತ್ರವನ್ನು ಹೇಳಲಾಗಿದೆ. ಯಾವ ನಕ್ಷತ್ರದಲ್ಲಿ ಅಗ್ನ್ಯಾಧಾನಮಾಡಿದರೆ ಎಲ್ಲ ಬಯಕೆಗಳೂ ಪ್ರಾಪ್ತ ವಾಗುವವೋ ಆ ನಕ್ಷತ್ರ ರೋಹಿಣೀ - `ತಂ ದೇವಾ ರೋಹಿಣ್ಯಾಮಾದಧತ | ಶತೋ ವೈ ತೇ ಸರ್ವಾನ್ ರೋಹಾನರೋಹನ್ |' ಎಂದು ಹೇಳಿದೆ. ಧನಕಾಮನೆ ಇದ್ದರೆ ಪುನರ್ವಸು ನಕ್ಷತ್ರದಲ್ಲಿ ಆಧಾನ ಮಾಡಬೇಕೆಂದು ಹೇಳಿದೆ. ಸಪ್ತವಾನಸ್ಪತಿಗಳ ಸಂಭಾರವನ್ನು ಆಹರಣ ಮಾಡುವ ಬಗೆಗೆ ಆಖ್ಯಾನಗಳನ್ನು ಹೇಳಿದೆ.

ಎರಡನೆಯ ಕಾಂಡದಲ್ಲಿ ಅಗ್ನಿಹೋತ್ರ, ಉಪಹೋಮ, ಸೌತ್ರಾಯಣಿ, ಬೃಹಸ್ಪತಿ ಸವ, ವೈಶ್ಯಸವ ಮುಂತಾದ ಬಗೆಬಗೆಯ ಸವಗಳ ವರ್ಣನೆಯೂ ಇವೊಂದೊಂದರಲ್ಲಿಯೂ ಉಪಯೋಗಿಸಬೇಕಾದ ಮಂತ್ರಗಳೂ ಇವೆ. ರಾಜನ ರಾಜ್ಯಾಬಿsಷೇಕ ಸಂದರ್ಭದಲ್ಲಿ ರಥಾರೋಹಣ, ವಪನ ಮುಂತಾದ ಸಂದರ್ಭಗಳಲ್ಲಿ ಬಳಸಬೇಕಾದ ಮಂತ್ರಗಳಿವೆ. ಈ ಬ್ರಾಹ್ಮಣದ ಎರಡನೆಯ ಕಾಂಡದ ಎಂಟನೆಯ ಪ್ರಪಾಠಕದ ಒಂಭತ್ತನೆಯ ಅನುವಾಕದಲ್ಲಿ ನಾಸದೀಯಸೂಕ್ತ ಉಪಹೋಮಪ್ರಕರಣದಲ್ಲಿ ಉದ್ಧೃತವಾಗಿದೆ.

ಮೂರನೆಯ ಕಾಂಡದಲ್ಲಿ ನಕ್ಷತ್ರೇಷ್ಟಿಯ ವಿಸ್ತೃತವರ್ಣನೆ ಇದೆ. ಒಂದೊಂದು ನಕ್ಷತ್ರಕ್ಕೂ ಪ್ರತ್ಯೇಕವಾದ ಪುರೋನುವಾಕ್ಯಾ ಮತ್ತು `ಯಾಜ್ಯಾ' ಮಂತ್ರಗಳು ಕೊಡಲ್ಪಟ್ಟಿವೆ. ಈ ಕಾಂಡದ ಹತ್ತು, ಹನ್ನೊಂದು ಮತ್ತು ಹನ್ನೆರಡನೆಯ ಪ್ರಪಾಠಕಗಳನ್ನು ಕಾಠಕಗಳೆನ್ನುತ್ತಾರೆ. ಇದರಲ್ಲಿ ಹತ್ತನೆಯ ಪ್ರಪಾಠಕ ಸಾವಿತ್ರಚಯನವನ್ನು ನಿರೂಪಿಸುತ್ತದೆ. ಈ ಕಾಂಡದ ಒಂಭತ್ತನೆಯ ಪ್ರಪಾಠಕದ ಹದಿನಾಲ್ಕನೆಯ ಅನುವಾಕದಲ್ಲಿ ಇಷ್ಟಿಗಳನ್ನು ಸಂವತ್ಸರಕಾಲ ಮಾಡುವಾಗ ವೀಣಾಗಾನವನ್ನು ಮಾಡಬೇಕೆಂದು ಹೇಳಲಾಗಿದೆ - `ಅಪ ವಾ ಏತಸ್ಮಾತ್ ಶ್ರೀಃ ರಾಷ್ಟ್ರಂ ಕ್ರಾಮತಿ' ಎಂದು ಆರಂಬಿsಸಿ - `ನಿಯಮವನ್ನು ಸ್ವೀಕರಿಸಿದ ರಾಜನಿಗೆ ರಾಜೋಪಚಾರವಿಲ್ಲದ ಕಾರಣ ಶ್ರೀಯು ಹೋಗಿಬಿಡುತ್ತದೆ. ಕ್ರತು ಸಮಾಪ್ತಿ ಆಗುವವರೆಗೂ ಅಧ್ವರ್ಯುವೇ ರಾಜಾ ಆಗಿದ್ದಾನೆ. ರಾಷ್ಟ್ರವೂ ಅವನಿಂದ ದೂರವಾಗುತ್ತದೆ. ಇವೆರಡರ ಪರಿಹಾರಾರ್ಥವಾಗಿ ವೀಣಾಗಾನದಲ್ಲಿ ಕುಶಲರಾದ ಇಬ್ಬರು ಗಾಯಕರು ಹಾಡಬೇಕು. ವೀಣೆಯು ಶ್ರೀಸ್ವರೂಪ. ಆದುದರಿಂದ ಆ ಗಾಯಕರು ಇವನಲ್ಲಿ ಶ್ರೀಯನ್ನು ದೊರಕಿಸಿಕೊಡುತ್ತಾರೆ. ವೀಣೆಯ ಶ್ರೀರೂಪತ್ವ ಲೋಕದಲ್ಲಿ ಪ್ರಸಿದ್ಧವೇ ಆಗಿದೆ. ದರಿದ್ರ ನಾದವನು ಹಣವನ್ನು ಪಡೆದಾಗ ಅವನ ಸುಖಕ್ಕಾಗಿ ಗಾಯಕರು ವೀಣಾವಾದನ ಮಾಡುವರು'' (೩-೯-೧೪).

ಮೂರನೆಯ ಕಾಂಡದಲ್ಲಿ ನಾಲ್ಕನೆಯ ಪ್ರಪಾಠಕದಲ್ಲಿ ಪುರುಷಮೇಧದ ಪಶುಗಳ ವಿಚಾರ ಬಂದಿದೆ. ಯೂಪ ಸಂಸ್ಕೃತಿ, ಯಜ್ಞಚ್ಛಿದ್ರ ಹಾಗೂ ಅಶ್ವಮೇಧ ಯಾಗಾನುಷ್ಠಾನದ ವಿವರಗಳು ವರ್ಣಿತವಾಗಿವೆ.

ಮೂರನೆಯ ಕಾಂಡದ ಹತ್ತನೆಯ ಪ್ರಪಾಠಕದಲ್ಲಿ ಸಾವಿತ್ರಚಯನದ ಫಲವನ್ನು ವಿಶದಪಡಿಸುತ್ತಾ ಋಷಿಯ ವೃತ್ತಾಂತವನ್ನು ಆಖ್ಯಾನದ ಮೂಲಕ ಹೇಳಲಾಗಿದೆ. `ಅಶ್ವತ್ಥನೆಂಬ ಹೆಸರಿನ ಮುನಿಯ ಪುತ್ರನಾದ `ಅಹೀನ' ಎಂಬ ಹೆಸರಿನ ಋಷಿ ಇದ್ದನು. ಅವನು ಸಾವಿತ್ರಾಗ್ನಿಯನ್ನು ಸ್ವಸ್ವರೂಪತ್ವೇನ ಧ್ಯಾನಮಾಡಿ ಸಾಕ್ಷಾತ್ಕರಿಸಿಕೊಂಡನು. ದೇಹಾಂತದಲ್ಲಿ ಅವನು ಸುವರ್ಣದೇಹವುಳ್ಳ ಹಂಸನಾಗಿ ಸ್ವರ್ಗವನ್ನು ಸೇರಿ ಆದಿತ್ಯನ ಸಾಯುಜ್ಯವನ್ನು ಪಡೆದನು. ಆದುದರಿಂದ ಆ ಉಪಾಸಕನಿಗೆ ಫಲವನ್ನು ಹೀಗೆ ಹೇಳಿದೆ - `ಹಂಸೋ ಹ ವೈ ಹಿರಣ್ಮಯೋ ಭೂತ್ವಾ | ಸ್ವರ್ಗಂ ಲೋಕಮೇತಿ | ಆದಿತ್ಯಸ್ಯ ಸಾಯುಜ್ಯಂ | ಯ ಏವಂ ವೇದ ಇತಿ |' ಎಂದು (ತೈ. ಬ್ರಾ. ೩-೧೦-೯). ಇದೇ ಕಾಂಡದ ಹತ್ತನೆಯ ಪ್ರಪಾಠಕದ ಹನ್ನೊಂದನೆಯ ಅನುವಾಕದಲ್ಲಿ ಭರದ್ವಾಜ ಋಷಿಯ ವೃತ್ತಾಂತವನ್ನು ನಿರೂಪಿಸಿದೆ. `ಭರದ್ವಾಜನೆಂಬ ಮಹರ್ಷಿ ಎಲ್ಲ ವೇದಗಳನ್ನು ಅಧ್ಯಯನ ಮಾಡಬೇಕೆಂಬ ಪ್ರಯತ್ನದಲ್ಲಿ ತೊಡಗಿ ಇಂದ್ರನನ್ನು ಪ್ರಸನ್ನಗೊಳಿಸಿಕೊಂಡು ಮೂರು ಆಯುಸ್ಸುಗಳನ್ನು ಪಡೆದುಕೊಂಡು ಗುರುಕುಲವಾಸ ಮಾಡಿ ವೇದಾಧ್ಯಯನ ಮಾಡಿದನು. ಮುನ್ನೂರುವರ್ಷಗಳ ಕೊನೆಯಲ್ಲಿ ಜೀರ್ಣಶರೀರನಾದವನೂ, ವೃದ್ಧನೂ, ಅಶಕ್ತನೂ ಆಗಿ ಶಯಿನಿಸಿದ್ದ ಅವನ ಬಳಿ ಇಂದ್ರನು ಬಂದು, `ನಿನಗೆ ನಾಲ್ಕನೆಯ ಆಯುಸ್ಸನ್ನು ಕೊಟ್ಟರೆ ಏನು ಮಾಡುವಿ ?' - ಎಂದು ಹೇಳಿದನು. `ನಾನು ವೇದಾಧ್ಯಯನವನ್ನೇ ಮಾಡುವೆನೆಂದು' ಅವನು ಹೇಳಿದನು. ಎಲ್ಲ ವೇದವನ್ನು ಅಧ್ಯಯನ ಮಾಡುವುದು ಅಶಕ್ಯವೆಂದು ಅವನಿಗೆ ಬೋದಿsಸುವುದಕ್ಕಾಗಿ ತನ್ನ ಯೋಗಸಾಮರ್ಥ್ಯದಿಂದ ಮೂರು ವೇದಗಳನ್ನೂ ಪರ್ವತಾಕಾರ ವನ್ನಾಗಿಸಿ ಅವನಿಗೆ ತೋರಿಸಿದ. ಆ ಪರ್ವತಗಳೊಂದೊಂದರಲ್ಲಿಯೂ ಒಂದೊಂದು ಮುಷ್ಟಿಯ ಮಣ್ಣನ್ನು ಎತ್ತಿಕೊಂಡು ಹೇಳಿದ. `ಎಲೈ ಭಾರದ್ವಾಜನೇ, ಇವು ಮೂರು ಪರ್ವತಗಳೂ ವೇದಗಳೇ. ಈ ಮೂರು ಆಯುಸ್ಸುಗಳಿಂದ ನೀನು ಸಾದಿsಸಿರುವುದು ಈ ಮೂರು ಮುಷ್ಟಿ ಮಂತ್ರ ಎಂದು ಉಳಿದುದೆಲ್ಲವೂ ನಿನ್ನಿಂದ ಅನದಿsತವಾದುದೇ. ಆದುದರಿಂದ ಸರ್ವವೇದಾಧ್ಯಯನ ಅಶಕ್ಯ. ನಿನಗೆ ಸರ್ವಾಧ್ಯಯನ ಫಲ ಅಪೇಕ್ಷಿತವಾದರೆ ಈ ಸಾವಿತ್ರಾಗ್ನಿಯನ್ನು ತಿಳಿ, ಧ್ಯಾನದಿಂದ ಸಾಕ್ಷಾತ್ಕರಿಸು' - ಎಂದು `ತಸ್ಮೈ ಹೈತಮಗ್ನಿಂ ಸಾವಿತ್ರಮುವಾಚ | ತಂ ಸ ವಿದಿತ್ವಾ | ಅಮೃತೋ ಭೂತ್ವಾ | ಸ್ವರ್ಗಂ ಲೋಕಮಿಯಾಯ | ಆದಿತ್ಯಸ್ಯ ಸಾಯುಜ್ಯಂ ಇತಿ |' - ಹೀಗೆ ಸಾವಿತ್ರಚಯನದ ಮಹತ್ವವನ್ನು ಇಲ್ಲಿ ಪ್ರತಿಪಾದಿಸಿದೆ.

ಕೊನೆಯದಾದ ಹನ್ನೆರಡನೆಯ ಪ್ರಪಾಠಕದಲ್ಲಿ `ಚಾತುರ್ಹೋತ್ರ' ಮತ್ತು `ವೈಶ್ವಸೃಜ' ಯಾಗದ ವರ್ಣನೆ ಇದೆ. ಇಲ್ಲಿ ವೇದಾಂತದರ್ಶನದ ಪ್ರಭಾವ ಕಂಡು ರುತ್ತದೆ. ಸಮಸ್ತ ಪದಾರ್ಥಗಳ ತ್ಯಾಗವೇ ಈ ಯಾಗದ ರಹಸ್ಯ. ಈ ಯಾಗವನ್ನನುಷ್ಠಿಸುವವರು ಬ್ರಹ್ಮನೊಡನೆ ಸಾಯುಜ್ಯ, ಸಾರ್ಷ್ಟಿಕಾ ಮತ್ತು ಸಮಾನಲೋಕತಾ ಎಂಬುವನ್ನು ಪಡೆಯುವರು. ಬ್ರಾಹ್ಮಣಗ್ರಂಥಗಳ ಶೈಲಿ ಪ್ರಸನ್ನವೂ ಉದಾತ್ತವೂ ಆದುದು. ಯಜ್ಞವಿಧಾನದ ವರ್ಣನೆಯನ್ನು ಚಿಕ್ಕಚಿಕ್ಕ ವಾಕ್ಯಗಳ ಪ್ರಯೋಗದಿಂದ ಸಾಕಷ್ಟು ಆಕರ್ಷಕವಾಗಿ ಇವು ಮಾಡುತ್ತವೆ. ಆಖ್ಯಾನಗಳು ಬಂದಾಗ ಹೃದಯಂಗಮವಾಗಿರುತ್ತವೆ. ಶ್ರದ್ಧಾಭಕ್ತಿಗಳಿಂದ ಕೂಡಿ ಭಗವತ್ಪೂಜೆಯನ್ನೇ ಜೀವನದ ಪರಮಧ್ಯೇಯವನ್ನಾಗಿ ಉಳ್ಳ ಸಾತ್ತ್ವಿಕರು ಆಚರಿಸುತ್ತಿದ್ದ ಅನುಷ್ಠಾನಗಳ ವಿವರಣೆ ಇಲ್ಲಿದೆ. ಪರಮಸತ್ಯವನ್ನು ಅನ್ವೇಷಿಸುವ ಒಂದು ಅಂತರಂಗ ದೃಷ್ಟಿ ಇಲ್ಲಿದೆ. ಮುಂದಿನ ಕಾಲದಲ್ಲಿ ರೂಪುಗೊಂಡ `ಮೀಮಾಂಸಾ' ಶಾಸ್ತ್ರದ ಉದಯಕ್ಕೆ ಇವು ಎಡೆಮಾಡಿಕೊಟ್ಟವು. ವೇದಾಧ್ಯಯನ ಮತ್ತು ವೇದಪಾರಾಯಣಗಳ ಪ್ರಯೋಜನ ಅಪಾರ. ವೇದಾಕ್ಷರಗಳ ಉಚ್ಚರಣೆಯೇ ಪುಣ್ಯಕರ.

- ಎನ್.ಎಸ್. ಅನಂತರಂಗಾಚಾರ್

 
 

 

   


Personalities | Institutions | Articles | Knowledge Store | Cultural Quiz | About Us | Contact Us | Help Us | Home